ನವದೆಹಲಿ: ಕೇಂದ್ರ ಸರಕಾರ ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್ ಅನ್ನು ಖಾಸಗಿ ಬ್ಯಾಂಕ್ ಜತೆ ವಿಲೀನಗೊಳಿಸಲು ಶೀಘ್ರದಲ್ಲಿಯೇ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಐಡಿಬಿಐ ಬ್ಯಾಂಕ್ ಎಲ್‌ಐಸಿಯ ಅಧೀನದಲ್ಲಿರುವ ಸಂಸ್ಥೆಯಾಗಿದ್ದು, ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತದೆ.
ಆರ್ ಬಿಐ ಅನುಮೋದನೆಯ ಮೇರೆಗೆ ಇತರ ಯಾವುದಾದರೂ ಬ್ಯಾಂಕ್ ಜತೆಗೆ ಐಡಿಬಿಐ ವಿಲೀನಗೊಳಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ವಿಲೀನ ಪ್ರಕ್ರಿಯೆ ಬಗ್ಗೆ ಸರಕಾರ ಮತ್ತು ಆರ್ ಬಿಐ ಮಟ್ಟದಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಐಡಿಬಿಐ ಬ್ಯಾಂಕ್ 57 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ರಿಟೇಲ್ ಬ್ಯಾಂಕಿಂಗ್ ಸೇರಿದಂತೆ ಹಲವಾರು ಹಣಕಾಸು ಸೇವೆಗಳನ್ನು ನೀಡುತ್ತಿದೆ. 2021ರಲ್ಲಿ 24,504 ಕೋಟಿ ರೂ. ಆದಾಯ ಗಳಿಸಿತ್ತು. ಒಟ್ಟು ಮೂರು ಲಕ್ಷ ಕೋಟಿ ರೂ. ಆಸ್ತಿಯನ್ನು ಹೊಂದಿದೆ. ಇದರಲ್ಲಿ ಎಲ್ ಐಸಿ 49.24% ಮತ್ತು ಕೇಂದ್ರ ಸರಕಾರ 45.48% ಷೇರುಗಳನ್ನು ಹೊಂದಿದೆ. 17,736 ಉದ್ಯೋಗಿಗಳು ಇದ್ದಾರೆ.