ನವ ದೆಹಲಿ: ಭಾರತ ಮತ್ತು ರಷ್ಯಾ 50 ಶತಕೋಟಿ ಡಾಲರ್ ( 4 ಲಕ್ಷ ಕೋಟಿ ರೂ.) ದ್ವಿಪಕ್ಷೀಯ ವ್ಯಾಪಾರದ ಗುರಿ ಸಾಧಿಸಲು ಮುಂದಿನ ವಾರ ಮಹತ್ವದ ಮಾತುಕತೆ ನಡೆಸಲಿದೆ. 2022ರಲ್ಲಿ ಉಭಯ ರಾಷ್ಟ್ರಗಳ ನಡುವೆ 31 ಶತಕೋಟಿ ಡಾಲರ್ (2.54 ಲಕ್ಷ ಕೋಟಿ ರೂ.) ವ್ಯಾಪಾರ ವಹಿವಾಟು ನಡೆದಿತ್ತು. ಇಂಧನ ಮತ್ತು ರಸಗೊಬ್ಬರ ವ್ಯಾಪಾರದಲ್ಲಿ ಗಣನೀಯ ಏರಿಕೆ ಆಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ರಷ್ಯಾ-ಭಾರತ ಬಿಸಿನೆಸ್ ಫೋರಮ್‌ನ (Russia-India Business Forum: Strategic Partnership for Development and growth ) ಸಭೆಯು ಮಾರ್ಚ್ 29-30ರಂದು ನಡೆಯಲಿದೆ.
ಮಾಹಿತಿ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ತಂತ್ರಜ್ಞಾನ ಸಾವರ್ನಿಟಿ, ಸ್ಮಾರ್ಟ್ ಸಿಟಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಆರೋಗ್ಯ, ಔಷಧ ವಲಯದಲ್ಲಿ ವಹಿವಾಟನ್ನು ಹೆಚ್ಚಿಸಲು ಮಾತುಕತೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 2025ರ ವೇಳೆಗೆ 30 ಶತಕೋಟಿ ಡಾಲರ್ ವಹಿವಾಟು ನಡೆಸುವ ಗುರಿ ಇತ್ತು. ಆದರೆ ಭಾರತವು ರಷ್ಯಾದಿಂದ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಆರಂಭಿಸಿದ ಬಳಿಕ ಗುರಿಯನ್ನು 2023ರಲ್ಲಿ 50 ಶತಕೋಟಿ ಡಾಲರ್‌ಗೆ ಏರಿಸಲಾಗಿದೆ.