Site icon Vistara News

Indian stock market: ಸೆನ್ಸೆಕ್ಸ್ ಕುಸಿತ: ಭಾರತೀಯ ಷೇರು ಮಾರುಕಟ್ಟೆಗೆ ಭಾರಿ ಹೊಡೆತ

Indian stock market

ಮುಂಬಯಿ: ಕಳೆದ ಮೂರು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian stock market) ತೀವ್ರ ಕುಸಿತವಾಗುತ್ತಿದ್ದು, ನಾಲ್ಕನೇ ದಿನದ ವೇಳೆಗೆ ನಿಫ್ಟಿ (Nifty) ಸೂಚ್ಯಂಕದಲ್ಲಿ (index) ಸುಮಾರು 650 ಪಾಯಿಂಟ್‌ಗಳನ್ನು ಕಳೆದುಕೊಂಡು ನೇರ ನಷ್ಟವನ್ನು ಅನುಭವಿಸಿದೆ. ಏಪ್ರಿಲ್ 16ರಂದು ನಿಫ್ಟಿ 50 ಸೂಚ್ಯಂಕವು 22,125 ಮಟ್ಟದಲ್ಲಿ ವಹಿವಾಟು ಆರಂಭಿಸಿ 22,103 ಅಂಕಗಳಿಗೆ ತಲುಪಿತು.

ಬಿಎಸ್‌ಇ (BSE) ಸಂವೇದಿ ಸೂಚ್ಯಂಕವು 72,892 ರಲ್ಲಿ ವಹಿವಾಟು ಪ್ರಾರಂಭಿಸಿ ಮೂರು ಸೆಷನ್‌ಗಳಲ್ಲಿ ಸುಮಾರು 2,184 ಪಾಯಿಂಟ್‌ಗಳನ್ನು ಕಳೆದುಕೊಂಡಿತ್ತು. ಬ್ಯಾಂಕ್ ನಿಫ್ಟಿ (bank nifty) 47,436 ಮಟ್ಟದಲ್ಲಿ ವಹಿವಾಟು ಪ್ರಾರಂಭಿಸಿ ಕನಿಷ್ಠ 47,316 ಅನ್ನು ತಲುಪಿದೆ.

ಎಷ್ಟು ನಷ್ಟ ?

ಕಳೆದ ಮೂರು ಅವಧಿಗಳಲ್ಲಿ ನಿಫ್ಟಿ 50 ಸೂಚ್ಯಂಕವು ಸುಮಾರು 650 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು 2,200 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕ 2,700 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ. ಈ ಮಧ್ಯೆ ಸ್ಮಾಲ್-ಕ್ಯಾಪ್ ಸೂಚ್ಯಂಕವು ಸುಮಾರು ಶೇಕಡಾ 1ರಷ್ಟು ಮತ್ತು ಮಿಡ್ ಕ್ಯಾಪ್ ಸೂಚ್ಯಂಕವು ಸುಮಾರು ಶೇ. 0.40 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

ಸೆನ್ಸೆಕ್ಸ್ ಕುಸಿತಕ್ಕೆ ಕಾರಣ ?

ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಸ್ಟಾಕ್ ಮಾರುಕಟ್ಟೆಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಯುದ್ಧ ಪರಿಸ್ಥಿತಿಯು ಇಲ್ಲಿ ಭೌಗೋಳಿಕ ರಾಜಕೀಯ ಅನಿಶ್ಚಿತತೆಯನ್ನು ಉಂಟು ಮಾಡಿದೆ.

ಜಾಗತಿಕ ಮಾರುಕಟ್ಟೆ ಸ್ಥಿತಿ ?

ಯುಎಸ್ ಷೇರು ಮಾರುಕಟ್ಟೆಯು ಶುಕ್ರವಾರ ತೀವ್ರ ನಷ್ಟ ಅನುಭವಿಸಿದ್ದರಿಂದ ವಿಶ್ವ ಮಟ್ಟದಲ್ಲೇ ಷೇರುಗಳು ಹೆಚ್ಚಾಗಿ ಮಾರಾಟವಾಗಿವೆ. ಏಷ್ಯಾದ ಮಾರುಕಟ್ಟೆಗಳಾದ ನಿಕ್ಕಿ, ಹ್ಯಾಂಗ್ ಸೆಂಗ್, ಕೊಸ್ಪಿಯಲ್ಲಿ ಸೋಮವಾರ ಹೆಚ್ಚಿನ ಒತ್ತಡ ಕಂಡು ಬಂದಿದೆ.


ಕಚ್ಚಾ ತೈಲ ಬೆಲೆ ?

ಕಚ್ಚಾ ತೈಲ ಬೆಲೆಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಮಾರ್ಚ್ 2024 ರಲ್ಲಿ ಸುಮಾರು ಶೇ. 6 ರಷ್ಟು ಹೆಚ್ಚಳವಾಗಿದ್ದು, ಏಪ್ರಿಲ್‌ನಲ್ಲಿ ಈಗಾಗಲೇ ಶೇ. 3 ರಷ್ಟು ಏರಿಕೆಯಾಗಿದೆ. ಹೀಗೆಯೇ ಕಚ್ಚಾ ತೈಲ ಬೆಲೆ ಏರಿಕೆಯಾದರೆ ಸ್ಥಳೀಯ ಕರೆನ್ಸಿ ಮತ್ತು ಹಣದುಬ್ಬರದ ಮೇಲೆ ಒತ್ತಡ ಉಂಟುಮಾಡುತ್ತದೆ.

ಯುಎಸ್ ಡಾಲರ್ ಮೌಲ್ಯ ?

ಯುಎಸ್ ಡಾಲರ್ ಮೌಲ್ಯ ನಿರಂತರವಾಗಿ ಏರುತ್ತಿದ್ದು, ಯುಎಸ್ ಡಾಲರ್ ಸೂಚ್ಯಂಕವು 106ಕ್ಕೆ ಸಮೀಪಿಸಿದೆ. ಜಪಾನಿನ ಯೆನ್ ವಿರುದ್ಧ 34 ವರ್ಷಗಳ ಗರಿಷ್ಠ ಮಟ್ಟವನ್ನು ಯುಎಸ್ ಡಾಲರ್ ತಲುಪಿದೆ. ಇದು ಭಾರತೀಯ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕ ಇಕ್ವಿಟಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

Exit mobile version