ನವ ದೆಹಲಿ: ಇಂಡಿಗೊ ಏರ್‌ಲೈನ್ 1 ಸಾವಿರ ಕೋಟಿ ರೂ. ನಷ್ಟದಿಂದ 3 ಸಾವಿರ ಕೋಟಿ ರೂ. ತ್ರೈಮಾಸಿಕ ಲಾಭಕ್ಕೆ ಮರಳಿದೆ. ( IndiGo record profit) 2023ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಂಡಿಗೊ ಏರ್‌ಲೈನ್ 3,089 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸ್ವಾರಸ್ಯವೆಂದರೆ ಏರ್‌ಲೈನ್ ಕಳೆದ ವರ್ಷ ಇದೇ ಅವಧಿಯಲ್ಲಿ 1,056 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಕಚ್ಚಾ ತೈಲ ದರ ಅನುಕೂಲಕರವಾಗಿ ಇದ್ದುದು, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಕಳೆದ ಕೆಲ ತಿಂಗಳಲ್ಲಿ ಹೊಸ ವಿಮಾನಗಳ ಸೇರ್ಪಡೆಯ ಪರಿಣಾಮ ಏರ್‌ಲೈನ್ ಲಾಭ ಗಳಿಸಿದೆ.
ಇಂಡಿಗೊ ಏರ್‌ಲೈನ್ 17 ವರ್ಷಗಳ ಹಿಂದೆ, 2006ರಲ್ಲಿ ಸ್ಥಾಪನೆಯಾದ ಏರ್‌ಲೈನ್ ಆಗಿದ್ದು, ಗುರುಗ್ರಾಮದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಏರ್‌ಲೈನ್ 17,160 ಕೋಟಿ ರೂ. ಆದಾಯವನ್ನು ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 32% ಏರಿಕೆಯಾಗಿದೆ. ಕಳೆದ 2022-23ರ ಇದೇ ಅವಧಿಯಲ್ಲಿ 13,018 ಕೋಟಿ ರೂ. ಆದಾಯ ಗಳಿಸಿತ್ತು.
ಬಿಎಸ್‌ಇನಲ್ಲಿ ಇಂಡಿಯೊ ಷೇರು ದರ ಬುಧವಾರ 2,565 ರೂ.ನಷ್ಟಿತ್ತು. 2023ರ ಜೂನ್ 30 ವೇಳೆಗೆ ಏರ್‌ಲೈನ್ 27,400 ಕೋಟಿ ರೂ. ನಗದನ್ನು ಒಳಗೊಂಡಿತ್ತು. ಕಳೆದ ವರ್ಷ ಜೂನ್‌ಗೆ ಹೋಲಿಸಿದರೆ 43% ಏರಿಕೆಯಾಗಿದೆ. ಆಗ ಸಂಸ್ಥೆ ಬಳಿ 19,069 ಕೋಟಿ ರೂ. ಕ್ಯಾಶ್ ಇತ್ತು. ಈ ವರ್ಷ ಜೂನ್ ಅಂತ್ಯಕ್ಕೆ ಇಂಡಿಗೊ ಏರ್‌ಲೈನ್ ಹೊಂದಿರುವ ಸಾಲದ ಮೊತ್ತ 46,291 ಕೋಟಿ ರೂ.ಗಳಾಗಿದೆ. 18% ಹೆಚ್ಚಳ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದ ಸಾಲ 39,277 ಕೋಟಿ ರೂ.
ಇಂಡಿಗೊ ಏರ್‌ಲೈನ್ 316 ಕೋಟಿ ರೂ. ವಿಮಾನಗಳನ್ನು ಜೂನ್ 30ರ ವೇಳೆಗೆ ಹೊಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಿಮಾನದ ಸಂಖ್ಯೆಯಲ್ಲಿ 12 ಹೆಚ್ಚಳವಾಗಿದೆ. ತ್ರೈಮಾಸಿಕ ಲಾಭ ಬಂದಿರುವುದಕ್ಕೆ ಏರ್‌ಲೈನ್ ಸಿಇಒ ಪೀಟರ್ ಎಲ್ಬರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತ್ರೈಮಾಸಿಕಗಳಿಂದ ಏರ್‌ಲೈನ್ ಉತ್ತಮ ಆದಾಯ ಗಳಿಸಿದೆ. ತ್ರೈಮಾಸಿಕದಲ್ಲಿ ಅತಿ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿದ್ದೇವೆ. ಇದು ಆದಾಯ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: IndiGo airline : ದೇಶದ ಅತಿ ದೊಡ್ಡ ಏರ್‌ಲೈನ್ ಇಂಡಿಗೊಗೆ 919 ಕೋಟಿ ರೂ. ಲಾಭ, ಕಾರಣವೇನು?
ಇಂಡಿಗೊ ಏರ್‌ಲೈನ್ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 500 ವಿಮಾನಗಳಿಗೆ ಆರ್ಡರ್ ನೀಡಿದೆ. ಒಟ್ಟಾರೆ ಆರ್ಡರ್‌ಗಳ ಸಂಖ್ಯೆ 1,000 ವಿಮಾನಗಳಿಗೆ ಏರಿಕೆಯಾಗಿದೆ. ರಾಹುಲ್ ಭಾಟಿಯಾ ಮತ್ತು ರಾಕೇಶ್ ಗಾಂಗ್ವಾಲ್ ಏರ್‌ಲೈನ್ ಸ್ಥಾಪಕರಾಗಿದ್ದಾರೆ. ಒಟ್ಟು 59,170 ಕೋಟಿ ರೂ. ಆಸ್ತಿಯನ್ನು ಹೊಂದಿದೆ.