ಬೆಂಗಳೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್‌ನಿಂದ (Infosys) ಡಿವಿಡೆಂಡ್ ರೂಪದಲ್ಲಿ 68.17 ಕೋಟಿ ರೂ. ಆದಾಯ ಗಳಿಸಿದ್ದಾರೆ. ಇನ್ಫೋಸಿಸ್‌ನಲ್ಲಿ ಅವರು ಹೊಂದಿರುವ ಷೇರುಗಳಿಗೆ ಈ ಆದಾಯ ಸಿಕ್ಕಿದೆ. ಇನ್ಫೋಸಿಸ್‌ನ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ಕಂಪನಿಯಲ್ಲಿ 3.89 ಕೋಟಿ ಷೇರುಗಳನ್ನು ಹೊಂದಿದ್ದಾರೆ.
ಇನ್ಫೋಸಿಸ್ 2022-23ರ ಸಾಲಿನಲ್ಲಿ ಪ್ರತಿ ಷೇರಿಗೆ 17.50 ರೂ. ಡಿವಿಡೆಂಡ್ ವಿತರಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿ ಪ್ರತಿ ಷೇರಿಗೆ 16.50 ರೂ. ಮಧ್ಯಂತರ ಡಿವಿಡೆಂಡ್ ಪ್ರಕಟಿಸಿತ್ತು. ಅದು ಕೂಡ ಅಕ್ಷತಾ ಮೂರ್ತಿಯವರಿಗೆ ಸಿಗಲಿದೆ. ಒಟ್ಟು 120.76 ಕೋಟಿ ರೂ. ಡಿವಿಡೆಂಡ್ ಅನ್ನು ಅಕ್ಷತಾ ಮೂರ್ತಿ ಪಡೆಯಲಿದ್ದಾರೆ.
ಇನ್ಫೋಸಿಸ್, ಜನವರಿ-ಮಾರ್ಚ್ ಅವಧಿಯ ತ್ರೈಮಾಸಿಕ ಹಣಕಾಸು ( Infosys Q4 results) ಫಲಿತಾಂಶವನ್ನು ಪ್ರಕಟಿಸಿದ್ದು, 6,128 ಕೋಟಿ ರೂ. ಲಾಭ ಗಳಿಸಿದೆ. ಪ್ರತಿ ಷೇರಿಗೆ 17.50 ರೂ.ಗಳ ಡಿವಿಡೆಂಡ್ ಅನ್ನೂ ಘೋಷಿಸಿದೆ. ಲಾಭದ ಪ್ರಮಾಣದಲ್ಲಿ 7.7% ಹೆಚ್ಚಳವಾಗಿದೆ.
ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯು 5,696 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇನ್ಫೋಸಿಸ್‌ನ ಆದಾಯದಲ್ಲಿ 16% ಏರಿದ್ದು, 37,441 ಕೋಟಿ ರೂ.ಗೆ ಏರಿದೆ. ಕಳೆದ ಸಾಲಿನಲ್ಲಿ ಕಂಪನಿ 32,276 ಕೋಟಿ ರೂ. ಆದಾಯ ಗಳಿಸಿತ್ತು. ಜನವರಿ-ಮಾರ್ಚ್ ಅವಧಿಯಲ್ಲಿ ಇನ್ಫೊಸಿಸ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಭವು 24.3%ರಿಂದ 20.9%ಕ್ಕೆ ತಗ್ಗಿದೆ. ಫಲಿತಾಂಶವು ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ದರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಷೇರು ದರ 2.79% ಇಳಿದಿತ್ತು. (1,383 ರೂ.)
ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ಸೇವೆ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TaTa Consultancy Services -TCS) ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 11,392 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 14.76% ಏರಿಕೆ ದಾಖಲಿಸಿದೆ. ಹಾಗೆಯೇ ಟಿಸಿಎಸ್ ಪ್ರತಿ ಷೇರಿಗೆ 24 ರೂ.ಗಳ ಡಿವಿಡೆಂಡ್ ಅನ್ನೂ ಘೋಷಿಸಿದೆ. ಇನ್ಫೋಸಿಸ್ ಜನವರಿ-ಮಾರ್ಚ್‌ನಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ 3,611 ಕಡಿತಗೊಳಿಸಿದೆ. ಒಟ್ಟಾರೆಯಾಗಿ 343,234 ಉದ್ಯೋಗಿಗಳು ಇದ್ದಾರೆ.
2022-23ರ ಸಾಲಿನಲ್ಲಿ ಟಿಸಿಎಸ್ ಪ್ರಬಲ ಬೆಳವಣಿಗೆಯನ್ನು ದಾಖಲಿಸಿದೆ. ಆರ್ಡರ್ ಬುಕ್ ಗಣನೀಯ ಬೆಳವಣಿಗೆ ದಾಖಲಿಸಿದೆ. ಇದು ಕಂಪನಿಯ ಸೇವೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸವನ್ನು ಬಿಂಬಿಸಿದೆ ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು ತಿಳಿಸಿದ್ದಾರೆ.
ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು 2023ರ ಜೂನ್ 1ರಂದು ಕೆ. ಕೃತಿವಾಸನ್ ಅವರಿಗೆ ಅಧಿಕಾರ ವಹಿಸಿಕೊಡಲಿದ್ದಾರೆ. ರಿಟೇಲ್, ಸಿಪಿಜಿ, ಜೀವ ವಿಜ್ಞಾನ ಮತ್ತು ಹೆಲ್ತ್ ಕೇರ್ ವಲಯದಲ್ಲಿ ಟಿಸಿಎಸ್ ಉತ್ತಮ ಬೆಳವಣಿಗೆ ದಾಖಲಿಸಿದೆ.
ಜನವರಿ-ಮಾರ್ಚ್ ಅವಧಿಯಲ್ಲಿ ಟಿಸಿಎಸ್‌ನಲ್ಲಿ 821 ಉದ್ಯೋಗಿಗಳು ಹೊಸತಾಗಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಉದ್ಯೋಗಿಗಳ ಸಂಖ್ಯೆ 614,795ಕ್ಕೆ ಏರಿಕೆಯಾಗಿದೆ. 2022-23ರಲ್ಲಿ 22,600 ಮಂದಿ ಹೊಸಬರು ಸೇರ್ಪಡೆಯಾಗಿದ್ದಾರೆ. ಟಿಸಿಎಸ್ ಷೇರು ದರ ಬುಧವಾರ 3,242 ರೂ.ನಷ್ಟಿತ್ತು.