ವಾಷಿಂಗ್ಟನ್: ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ತಗ್ಗಿಸಲು ರೆಪೊ ದರವನ್ನು ಏರಿಸಿದಂತೆ ಅಮೆರಿಕದಲ್ಲೂ 22 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಬಡ್ಡಿ ದರವನ್ನು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಹೆಚ್ಚಿಸಿದೆ. ಮಾತ್ರವಲ್ಲದೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಹಣದುಬ್ಬರದ ಉಪಶಮನಕ್ಕೆ ಬಡ್ಡಿ ದರಗಳನ್ನು ಏರಿಸಲಾಗುತ್ತಿದೆ. ಹಲವಾರು ರಾಷ್ಟ್ರಗಳು ಇತ್ತೀಚೆಗೆ ತಮ್ಮ ಬಡ್ಡಿ ದರಗಳನ್ನು ಪರಿಷ್ಕರಿಸಿವೆ. ಮತ್ತೆ ಹಲವು ರಾಷ್ಟ್ರಗಳು ಏರಿಕೆಗೆ ಸಜ್ಜಾಗಿವೆ. ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ರಷ್ಯಾ, ಈಗಾಗಲೇ ಬಡ್ಡಿ ದರಗಳನ್ನು ಹೆಚ್ಚಿಸಿವೆ.
ಅಮೆರಿಕದಲ್ಲಿ ಬಡ್ಡಿ ದರ ಏರುಗತಿ
ಅಮೆರಿಕದಲ್ಲಿ ಬಡ್ಡಿ ದರವನ್ನು ಶೇ.0.75ರಿಂದ ಶೇ.1ಕ್ಕೆ ಏರಿಸಲಾಗಿದೆ. 2000ರಿಂದೀಚೆಗೆ ಇದು ಗರಿಷ್ಠ ಪ್ರಮಾಣವಾಗಿದೆ. ಇದರಿಂದ ಅಮೆರಿಕದಲ್ಲೂ ಸಾಲದ ಬಡ್ಡಿ ದರಗಳು ಹೆಚ್ಚಲಿವೆ. ಅಮೆರಿಕದ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಸಾಲದ ಬಡ್ಡಿ ದರಗಳು ಅತ್ಯಲ್ಪ. ಅಲ್ಲಿ ಬಡ್ಡಿ ದರಗಳು ಶೂನ್ಯ ಮಟ್ಟದಲ್ಲಿರುವುದೂ ವಿಶೇಷವೇನಲ್ಲ. ಹೀಗಾಗಿ ಈಗ ಅಮೆರಿಕ ಬಡ್ಡಿ ದರವನ್ನು ಗಣನೀಯ ಏರಿಸಲು ಮುಂದಾಗಿರುವುದು ಜಗತ್ತಿನ ಗಮನ ಸೆಳೆದಿದೆ.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಮರ ಮತ್ತು ಚೀನಾದಲ್ಲಿ ಕೋವಿಡ್ ಕುರಿತ ಲಾಕ್ ಡೌನ್‌ಗಳು ಆರ್ಥಿಕತೆಯ ಮೇಲೆ ಒತ್ತಡ ಸೃಷ್ಟಿಸಿದೆ. ಹಣದುಬ್ಬರ ಮತ್ತಷ್ಟು ಹೆಚ್ಚುವ ಆತಂಕ ಉಂಟಾಗಿದೆ ಎಂದು ಫೆಡರಲ್ ರಿಸರ್ವ್ ತಿಳಿಸಿದೆ.
ಕೋವಿಡ್-19 ಬಿಕ್ಕಟ್ಟಿನ ಬಳಿಕ ಆರ್ಥಿಕತೆಯ ಚೇತರಿಕೆಗೆ ನೆರವಿನ ಪ್ಯಾಕೇಜ್‌ಗಳನ್ನು ನೀಡಿದ್ದರಿಂದ ಫೆಡರಲ್ ರಿಸರ್ವ್ ಬ್ಯಾಲೆನ್ಸ್ ಶೀಟ್ 9 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಈ ಬ್ಯಾಲೆನ್ಸ್ ಶೀಟ್‌ನ ಗಾತ್ರ ಜೂನ್, ಜುಲೈ ಮತ್ತು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಳಿಕೆಯಾಗಲಿದೆ.
ರೆಪೊ ದರಗಳ ಹೆಚ್ಚಳ: ಏರಲಿದೆ ನಿಮ್ಮ ಬಡ್ಡಿ
41 ವರ್ಷಗಳಲ್ಲಿ ಗರಿಷ್ಠ ಹಣದುಬ್ಬರ
ಅಮೆರಿಕದಲ್ಲಿ 2022ರ ಮಾರ್ಚ್ ನಲ್ಲಿ ಶೇ.8.4 ಹಣದುಬ್ಬರ ದಾಖಲಾಗಿತ್ತು. ಇದು ಕಳೆದ 41 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣವಾಗಿದೆ. 1981ರ ಬಳಿಕ ಈ ಮಟ್ಟಕ್ಕೆ ಹಣದುಬ್ಬರ ಜಿಗಿದಿರಲಿಲ್ಲ. ಫೆಡರಲ್ ರಿಸರ್ವ್ ನಿಗದಿಪಡಿಸಿರುವ ಸುರಕ್ಷತೆಯ ಮಟ್ಟಕ್ಕಿಂತ ಶೇ.2ರಷ್ಟು ಹೆಚ್ಚಿನ ಮಟ್ಟಕ್ಕೆ ಹಣದುಬ್ಬರ ವೃದ್ಧಿಸಿದೆ.
ಹೆಚ್ಚುತ್ತಿರುವ ಅನಿಲ ದರವೇ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಲು ಕಾರಣವಾಗಿತ್ತು. ಆಹಾರ ವಸ್ತುಗಳಲ್ಲಿ ಬೆಲೆ ಏರಿಕೆ ಕೂಡ ಮಾರ್ಚ್ ನಲ್ಲಿ ಹಣದುಬ್ಬರ ಉಲ್ಬಣಿಸಲು ಮತ್ತೊಂದು ಕಾರಣವಾಗಿತ್ತು. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ನಾನಾ ನಿರ್ಬಂಧಗಳನ್ನು ಹೇರಿವೆ. ಇದರ ಪರಿಣಾಮ ಅಮೆರಿಕದಲ್ಲಿ ಅನಿಲದಬೆಲೆ ಜಿಗಿಯುತ್ತಿದೆ. ಅನಿಲ ದುಬಾರಿಯಾಗಿರುವುದರಿಂದ ಸಾಗಣೆ ವೆಚ್ಚದಲ್ಲಿ ಹೆಚ್ಚಳ ಉಂಟಾಗಿದೆ. ಆಹಾರ, ಇಂಧನ, ಎಲೆಕ್ಟ್ರಾನಿಕ್ಸ್ ತುಟ್ಟಿಯಾಗುತ್ತಿವೆ. ಇದೀಗ ಬಡ್ಡಿ ದರ ಹೆಚ್ಚಳದಿಂದ ಸಾಲದ ಬಡ್ಡಿ ದರಗಳೂ ಏರಿಕೆಯಾಗಲಿವೆ. ಕ್ರೆಡಿಟ್ ಕಾರ್ಡ್, ಆಟೊಮೊಬೈಲ್ ಸಾಲ ದುಬಾರಿಯಾಗಲಿವೆ. ಆಗ ಅವುಗಳ ಖರೀದಿ ಕಡಿಮೆಯಾಗಿ ಬೆಲೆಗಳೂ ತಗ್ಗುವ ನಿರೀಕ್ಷೆ ಇದೆ.
Explainer: ಬೆಲೆಯೇರಿಕೆ ತಡೆಯೋಕೆ ಬಡ್ಡಿದರ ಏರಿಕೇನಾ?
7 ಸಲ ಬಡ್ಡಿ ಹೆಚ್ಚಳ ನಿರೀಕ್ಷೆ
ಆರ್ಥಿಕ ತಜ್ಞರ ಪ್ರಕಾರ ಅಮೆರಿಕದಲ್ಲಿ ಫೆಡರಲ್ ರಿಸರ್ವ್ 2022ರಲ್ಲಿ 7 ಸಲ ಬಡ್ಡಿ ದರಗಳನ್ನು ಏರಿಸುವ ಹಾಗೂ ಇದರಿಂದ 2023 ಶುರುವಾಗುವ ವೇಳೆಗೆ ಶೇ.2.9ಕ್ಕೆ ಮುಟ್ಟುವ ನಿರೀಕ್ಷೆ ಇದೆ. ಅಮೆರಿಕದಲ್ಲಿ ಈ ವರ್ಷ ನವೆಂಬರ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿರುವುದರಿಂದ ಹಣದುಬ್ಬರ ಹೆಚ್ಚಳ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಸವಾಲಾಗುವ ಸಾಧ್ಯತೆ ಇದೆ. ಹೀಗಿದ್ದರೂ ಅಮೆರಿಕದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ನಿರುದ್ಯೋಗದ ಮಟ್ಟ ಕಳೆದ 50 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದಲ್ಲಿ ಇದೆ.
ಕೋವಿಡ್, ರಷ್ಯಾ-ಉಕ್ರೇನ್ ಬಿಕ್ಕಟ್ಟು
ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಕಾಡುತ್ತಿದ್ದು, ಅಮೆರಿಕ, ಭಾರತ, ಆಸ್ಟ್ರೇಲಿಯಾದಲ್ಲಿ ಬಡ್ಡಿ ದರಗಳನ್ನು ಏರಿಸಲಾಗಿದೆ. ಬ್ರಿಟನ್ ಸೇರಿದಂತೆ ಮತ್ತಷ್ಟು ದೇಶಗಳಲ್ಲಿ ನಿರೀಕ್ಷಿಸಲಾಗಿದೆ. ರಷ್ಯಾ-ಉಕ್ರೇನ್ ಸಮರದ ಬಳಿಕ ಜಗತ್ತಿಗೆ ಹಣದುಬ್ಬರ ಸವಾಲಾಗಿ ಪರಿಣಮಿಸಿರುವುದನ್ನು ಇದು ಬಿಂಬಿಸಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಬಹುತೇಕ ದೇಶಗಳು ಆರ್ಥಿಕ ಚೇತರಿಕೆಗೋಸ್ಕರ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಆರ್ಥಿಕ ನೆರವಿನ ಪ್ಯಾಕೇಜ್‌ಗಳನ್ನು ಘೋಷಿಸಿದ್ದವು. ಇದರ ಪರಿಣಾಮ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಳವಾಗಿತ್ತು. ಆದರೆ ಅದಕ್ಕೆ ತಕ್ಕಂತೆ ಉತ್ಪಾದನೆ ಮತ್ತು ಸೇವೆ ದೊರೆಯದಿದ್ದರೆ ಅಥವಾ ಅಸ್ತವ್ಯಸ್ತವಾದರೆ ಹಣದುಬ್ಬರ ಏರುತ್ತದೆ. ಇದನ್ನು ನಿಯಂತ್ರಿಸಲು ರಾಷ್ಟ್ರಗಳು ಬಡ್ಡಿ ದರ ಏರಿಕೆಯ ಮೊರೆ ಹೋಗಿವೆ.