Site icon Vistara News

ITR Filing: ನಕಲಿ ಮನೆ ಬಾಡಿಗೆ ರಸೀದಿ ದಾಖಲೆ ನೀಡಿದರೆ ಹುಷಾರ್!‌ ಐಟಿ ನೋಟೀಸ್‌ ಬರುತ್ತೆ

ITR

ಹೊಸದಿಲ್ಲಿ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್- ITR Filing) ಸಲ್ಲಿಸುವಾಗ ನಕಲಿ ಬಾಡಿಗೆ ರಸೀದಿ, ಗೃಹ ಸಾಲದ ಹೆಚ್ಚುವರಿ ಉಲ್ಲೇಖ ನೀಡುವ ಸಂಬಳದಾರರು (salaried employee) ನೀವಾಗಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ನಿಮ್ಮ ಮೇಲೆ ಐಟಿ ಇಲಾಖೆ (income tax department) ಒಂದು ಕಣ್ಣಿಡಲಿದೆ.

ಆದಾಯ ತೆರಿಗೆ (ಐಟಿ) ಇಲಾಖೆಗೆ ಐಟಿಆರ್‌ ಸಲ್ಲಿಸುವ ಸಂಬಳದಾರರು ತಮ್ಮ ಮನೆ ಬಾಡಿಗೆ ಅಥವಾ ಮನೆ ಸಾಲದ ಪ್ರೀಮಿಯಂ ವಿವರ ನೀಡಿ ಅದಕ್ಕೆ ತೆರಿಗೆ ಕಡಿತದಿಂದ ವಿನಾಯಿತಿ ಪಡೆಯಬಹುದಾಗಿದೆ. ಅನೇಕ ಮಂದಿ ಇದಕ್ಕೆ ತಮ್ಮ ನಿಕಟ ಸಂಬಂಧಿಗಳಿಂದ ನಕಲಿ ಬಾಡಿಗೆ ರಸೀದಿ ಬಳಸಿಕೊಳ್ಳುತ್ತಾರೆ. ಗೃಹ ಸಾಲದ ಪ್ರೀಮಿಯಂನಲ್ಲಿ ಹೆಚ್ಚುವರಿ ತೋರಿಸುತ್ತಾರೆ. ನಕಲಿ ದೇಣಿಗೆ ವಿವರ ನೀಡುತ್ತಾರೆ. ಇಂಥ ವಂಚನೆಗಳನ್ನು ತಡೆಗಟ್ಟಲು ಐಟಿ ಇಲಾಖೆ ಮುಂದಾಗಿದೆ.

ಈ ಮೊದಲು ಇಂಥ ಸಣ್ಣಪುಟ್ಟ ವಂಚನೆಗಳನ್ನು ಮಾಡುವುದು ಸುಲಭವಾಗಿತ್ತು. ಆದರೆ ಇದೀಗ ತೆರಿಗೆ ಇಲಾಖೆ ಬಳಸುತ್ತಿರುವ ನೂತನ ಸಾಫ್ಟ್‌ವೇರ್‌ನ ಪರಿಣಾಮ ಇವುಗಳನ್ನು ಸುಲಭವಾಗಿ ಪತ್ತೆ ಹಚ್ಚಲಾಗುತ್ತಿದೆ. ಇಂಥ ತೆರಿಗೆದಾರರಿಗೆ ನೋಟೀಸ್‌ಗಳನ್ನು ಇಲಾಖೆ ಕಳುಹಿಸುತ್ತಿದೆ. ತಾವು ನೀಡಿದ ಉಲ್ಲೇಖಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಕೋರಿದ ನೋಟೀಸ್‌ಗಳು ತೆರಿಗೆದಾರರ ಮನೆಗಳಿಗೆ ಹೋಗುತ್ತಿವೆ.

ಸೆಕ್ಷನ್ 10 (13A) ಅಡಿಯಲ್ಲಿ ಮನೆ ಬಾಡಿಗೆ ಭತ್ಯೆಯ ಅಡಿಯಲ್ಲಿ ವಿನಾಯಿತಿ, ವಿಭಾಗ 10 (14) ಅಡಿಯಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯಕರನ್ನು ನೇಮಿಸಿಕೊಳ್ಳಲು ಭತ್ಯೆ, ಐಟಿ ಕಾಯಿದೆಯ ಸೆಕ್ಷನ್ 24 (ಬಿ) ಅಡಿಯಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿಗೆ ಕಡಿತ, ಇತ್ಯಾದಿಗಳಿಗೆ ಸಂಬಂಧಿಸಿ ನೀಡಲಾಗುವ ಮಾಹಿತಿಗೆ ಪೂರಕ ದಾಖಲೆಗಳನ್ನು ಕೇಳಿ ತೆರಿಗೆದಾರರಿಗೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ.

ಐಟಿ ದಾಖಲೆಗಳ ಕಂಪ್ಯೂಟರೀಕರಣದಿಂದಾಗಿ ಈ ದಾಖಲೆಗಳಲ್ಲಿ ಇರುವ ಮಾಹಿತಿಯನ್ನು ಪರಿಶೀಲಿಸಿ ವಂಚನೆ ಸಾಧ್ಯತೆ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ. ಐಟಿ ರಿಟರ್ನ್ಸ್‌ ಸಲ್ಲಿಸುವವರು ನೀಡುವ ದಾಖಲೆಗಳ ಜತೆಗೆ ಹೊರಗಿನ ಮಾಹಿತಿಗಳನ್ನೂ ತರಿಸಿಕೊಂಡು ಪರಿಶೀಲಿಸಲಾಗುತ್ತಿದೆ ಎಂದು ಇಲಾಖೆಯ ತಜ್ಞರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ITR filing errors : ಐಟಿ ರಿಟರ್ನ್‌ ಫೈಲಿಂಗ್ ವೇಳೆ ಜನ ಮಾಡುವ 10 ಮಿಸ್ಟೇಕ್‌ಗಳು

Exit mobile version