ಮುಂಬಯಿ: ಟಾಟಾ ಕನ್‌ಸ್ಯೂಮರ್ ಪ್ರಾಡಕ್ಸ್ಟ್ ಬಿಸ್ಲೇರಿ ಇಂಟರ್‌ನ್ಯಾಶನಲ್ ಕಂಪನಿಯ (Bisleri International) ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದ ಬಳಿಕ, ಬಿಸ್ಲೇರಿಯ ಸಾರಥ್ಯವನ್ನು ಕಂಪನಿಯ ಅಧ್ಯಕ್ಷ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ (42) ವಹಿಸಲಿದ್ದಾರೆ. ಸ್ವತಃ ರಮೇಶ್ ಚೌಹಾಣ್ ಅವರೇ ಈ ವಿಷಯ ತಿಳಿಸಿದ್ದಾರೆ. ಬಿಸ್ಲೇರಿಯನ್ನು ಖರೀದಿಸುವ ಬಗ್ಗೆ ಟಾಟಾ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಮಾತುಕತೆ ನಡೆಸಿತ್ತು. ಆದರೆ ಇದೀಗ ಮಾತುಕತೆ ಸ್ಥಗಿತವಾಗಿದೆ. ಸುಮಾರು 7,000 ಕೋಟಿ ರೂ.ಗೆ ಬಿಸ್ಲೇರಿಯನ್ನು ಟಾಟಾ ಕಂಪನಿ ಖರೀದಿಸಲಿದೆ ಎಂದು ಕೆಲ ತಿಂಗಳ ಹಿಂದೆಯೇ ವದಂತಿ ಉಂಟಾಗುತ್ತು.
ಬಿಸ್ಲೇರಿಯನ್ನು ಸಿಇಒ ಏಂಜೆಲೊ ಜಾರ್ಜ್ ನೇತೃತ್ವದ ವೃತ್ತಿಪರ ತಂಡದ ಜತೆಗೆ ಮಗಳು ಜಯಂತಿ ಚೌಹಾಣ್ ಮುನ್ನಡೆಸಲಿದ್ದಾರೆ ಎಂದು ರಮೇಶ್ ಚೌಹಾಣ್ ತಿಳಿಸಿದ್ದಾರೆ. ಜಯಂತಿ ಚೌಹಾಣ್ ಪ್ರಸ್ತುತ ಕಂಪನಿಯ ಉಪಾಧ್ಯಕ್ಷೆಯಾಗಿದ್ದಾರೆ. ಪ್ರಾಡಕ್ಟ್ ಡೆವಲಪ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. 24ನೇ ವಯಸ್ಸನಲ್ಲಿ ಕಂಪನಿಗೆ ಸೇರ್ಪಡೆಯಾಗಿದ್ದರು.
ಬಿಸ್ಲೇರಿಯ ಭಾಗವಾಗಿರುವ ವೇದಿಕಾ ಬ್ರಾಂಡ್‌ನ ಅಭಿವೃದ್ಧಿಯಲ್ಲಿ ಕಳೆದ ಕೆಲ ವರ್ಷಗಳಿಂದ ಜಯಂತಿ ಚೌಹಾಣ್ ತೊಡಗಿಸಿಕೊಂಡಿದ್ದರು. ಜತೆಗೆ ಪ್ರತಿ ವಿಭಾಗದಲ್ಲೂ ಕ್ರಿಯಾಶೀಲತೆಗೆ ಒತ್ತು ನೀಡಿದ್ದರು. ಡಿಜಿಟಲ್ ಮಾರ್ಕೆಂಟಿಂಗ್‌ನಲ್ಲೂ ಅವರಿಗೆ ಆಸಕ್ತಿ ಇದೆ. ಕಂಪನಿಯ ಆಟೊಮೇಶನ್‌ನಲ್ಲೂ ಅವರು ಸಕ್ರಿಯರಾಗಿದ್ದರು ಎಂದು ರಮೇಶ್ ಚೌಹಾಣ್ ತಿಳಿಸಿದ್ದಾರೆ.