Site icon Vistara News

karnataka budget 2023 : ಬೆಂಗಳೂರಿನಲ್ಲಿ‌ 100 ಎಕರೆ ಸೆಮಿಕಂಡಕ್ಟರ್‌ ಪಾರ್ಕ್ ಸ್ಥಾಪನೆ

chip

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ರಾಜ್ಯದಲ್ಲಿ ಸೆಮಿಕಂಡಕ್ಟರ್‌ಗೆ ಸರ್ಕಾರ ಉತ್ತೇಜನ ನೀಡಲಿದೆ. ಬೆಂಗಳೂರಿನ (karnataka budget 2023) ಕಾಡುಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ ಟೆಕ್ನಾಲಜಿ ಇನ್ನೊವೇಶನ್‌ ಪಾರ್ಕ್‌ ಅಸ್ತಿತ್ವಕ್ಕೆ ಬರಲಿದೆ. ಇಲ್ಲಿ ಸೆಮಿಕಂಡಕ್ಟರ್‌ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ವಿನ್ಯಾಸ ಇತ್ಯಾದಿಗೆ ಸೌಲಭ್ಯ ನೀಡಲಾಗುವುದು.

ಯಾವುದೇ ಒಂದು ಉದ್ಯಮ ಶುರು ಮಾಡಲು ಒಂದೇ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಬೇಕಾಗುವ ಎಲ್ಲಾ ಪರವಾನಗಿಗಳನ್ನು ಅದೇ ಪೋರ್ಟಲ್‌ನಲ್ಲಿ ಸಕಾಲದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಉದ್ಯಮಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಅನುಕೂಲವಾಗಲಿದೆ.

ರಾಜ್ಯ ಸರ್ಕಾರವು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರದ ಸ್ವಾಧೀನದಲ್ಲಿರುವ ಬೆಮೆಲ್‌ (BEML) ಕಂಪನಿಯ ಜಮೀನಿನಲ್ಲಿ ಕೈಗಾರಿಕಾ ಟೌನ್‌ಶಿಪ್‌ ಅನ್ನು ಅಭಿವೃದ್ಧಿಪಡಿಸಲಿದೆ.

ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್‌ ಮತ್ತು ದಕ್ಷಿಣ ಕನ್ನಡದಲ್ಲಿ ರಫ್ತು ಆಧರಿತ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಒಂದು ಹೊಸ ನೀತಿಯನ್ನು ಜಾರಿಗೆ ತರಲಾಗುವುದು. ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಪರಿವರ್ತಿಸದೆ ಬಳಸಲು ಅವಕಾಶ ನೀಡಲಾಗುವುದು. ಇದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಯಲ್ಲಿ ಸೂಕ್ತ ತಿದ್ದುಪಡಿ ತರಲಾಗುವುದು.

ಏರೋಸ್ಪೇಸ್‌ ವಲಯದಲ್ಲಿ ರಾಜ್ಯದ ಬಲವನ್ನು ಮತ್ತಷ್ಟು ವೃದ್ಧಿಸಲು ಮತ್ತು ವಿಶೇಷವಾಗಿ ಎಂಎಸ್‌ಎಂಇಗಳ ಮೇಲೆ ಕೇಂದ್ರೀಕರಿಸಲು ಅತ್ಯಾಧುನಿಕ ಕರ್ನಾಟಕ ಏರೋಸ್ಪೇಸ್‌ ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್‌ ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಪಾರ್ಕ್‌ನಲ್ಲಿ ಸ್ಥಾಪಿಸಲಾಗುವುದು.

ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಸಾಮಾನ್ಯ ಸೌಲಭ್ಯ ಕೇಂದ್ರ: ರಾಜ್ಯದಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಸಾರ್ವಜನಿಕ ಉದ್ದಿಮೆಗಳನ್ನು ಆಧುನೀಕರಣಗೊಳಿಸಲಾಗುವುದು. ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಹುಬ್ಬಳ್ಳಿ, ಕಲಬುರಗಿಯ ಚಿತ್ತಾಪುರ, ಉತ್ತರ ಕನ್ನಡದ ಕೋಡ್ಕಣಿ, ಬೆಳಗಾವಿಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ವಿಜಯಪುರದ ಇಂಡಿ ಮತ್ತು ಯಾದಗಿರಿಯ ಶಹಪೂರದಲ್ಲಿ ಹೊಸತಾಗಿ ಕೈಗಾರಿಕಾ ವಸಾಹತುಗಳನ್ನು ತೆರೆಯಲಾಗುವುದು.

ಲಿಥಿಯಂ ಅನ್ವೇಷಣೆ: ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಹಾತ್ಮಾ ಗಾಂಧಿ ವಸ್ತ್ರೋದ್ಯಮ ಕೋಶವನ್ನು ಸ್ಥಾಪಿಸಲಾಗುವುದು. 10 ಎಚ್‌ಪಿ ತನಕ ವಿದ್ಯುತ್‌ ಸಂಪರ್ಕ ಹೊಂದಿರುವ ಮಗ್ಗದ ಘಟಕಗಳಿಗೆ ಮಾಸಿಕ 250 ಯುನಿಟ್‌ ತನಕ ಉಚಿತ ವಿದ್ಯುತ್‌ ನೀಡಲಾಗುವುದು. ಮಂಡ್ಯದ ಮೈಸೂರು ಶುಗರ್‌ ಕಂಪನಿಗೆ ಕಾಯಕಲ್ಪ ನೀಡಲಾಗುವುದು. ವೈಜ್ಞಾನಿಕ ಗಣಿಗಾರಿಕೆ ಉತ್ತೇಜಿಸಲು ಹಾಗೂ ರಾಜಸ್ವ ಸಂಗ್ರಹಣೆ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡಲಿದೆ. ರಾಜ್ಯದಲ್ಲಿ ಲಿಥಿಯಂ ಖನಿಜಾನ್ವೇಷಣೆಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು. ನವೋದ್ಯಮಿಗಳಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ವಿಶ್ವದರ್ಜೆಯ ಪರಿಪೋಷಣ ಕೇಂದ್ರ ʻINNOVERSEʼ ಅನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.

ಸ್ಟಾರ್ಟಪ್‌ಗಳಿಗೆ ನೆರವು: ಸ್ಟಾರ್ಟಪ್‌ ನೀತಿಯಡಿಯಲ್ಲಿ ಅನುದಾನ ನೀಡಿರುವ ಸ್ಟಾರ್ಟ್‌ಅಪ್‌ಗಳ ಪರಿಹಾರಗಳ ಅಳವಡಿಕೆಯನ್ನು ಹೆಚ್ಚಿಸಲು ʻPropelʼ ಎಂಬ ಯೋಜನೆಯನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ. ಸ್ಟಾರ್ಟ್ಅಪ್‍ಗಳಿಗೆ Global Innovation Alliance- Market Access Programme (GIA-MAP) ಕಾರ್ಯಕ್ರಮವನ್ನು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ. New Age Incubation Network (NAIN) ಕೇಂದ್ರಗಳನ್ನು ಬೆಂಬಲಿಸಲು ತಂತ್ರಜ್ಞಾನ ವರ್ಗಾವಣೆ ಸಂಸ್ಥೆಯನ್ನು ನಾಲ್ಕು ಕೋಟಿ ರೂ. ಗಳ ಯೋಜನಾ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.

ಹೆಲ್ತ್‌-ಟೆಕ್‌ ಮತ್ತು ಮೆಡ್-ಟೆಕ್‌ನಲ್ಲಿ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರವನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ. ಜೈವಿಕ-ಬ್ಯಾಂಕ್ (Bio Bank) ಅನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ʻCentre of Excellence in Wireless & Wired Technologies in Karnataka (COEWWT)ʼ ಅನ್ನು 25 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಐದು ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ. ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇನ್‌ ಡಿಸೈನ್ (Centre of Excellence in Design) ಕೇಂದ್ರವನ್ನು 20 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಎಂಟು ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನೀತಿಯ ಅನುಷ್ಠಾನಕ್ಕೆ ದೃಢವಾದ ಮತ್ತು ಪಾರದರ್ಶಕ ಆಡಳಿತದ ಚೌಕಟ್ಟನ್ನು ರಚಿಸುವುದು ಹಾಗೂ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ. ಈ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನವನ್ನು (ಕೆಎಸ್‌ಆರ್‌ಎಫ್) ರಚಿಸಲಾಗುವುದು.

ಇ-ಪ್ಲಾಟ್‌ಫಾರ್ಮ್‌ : ಸಂಶೋಧನೆ ಮತ್ತು ನಾವೀನ್ಯತೆ ವ್ಯವಸ್ಥೆಯು ಉದ್ಯಮಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಗಳು ಸೇರಿದಂತೆ ಇವರ ನಡುವಿನ ಸಂಬಂಧಗಳ ಸಂಕೀರ್ಣ ವ್ಯವಸ್ಥೆಯಾಗಿದೆ. ಈ ಎಲ್ಲಾ ಭಾಗೀದಾರರನ್ನು ಒಟ್ಟುಗೂಡಿಸಲು ಮತ್ತು ಅವರ ನಡುವೆ ಸಮನ್ವಯತೆಯನ್ನು ಸಾಧಿಸಲು ಇ-ಪ್ಲಾಟ್‌ಫಾರ್ಮ್‌ e-KRDIP ಅನ್ನು ರಚಿಸಲಾಗುವುದು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ರೈತರು, ಕುಶಲಕರ್ಮಿಗಳು, ಕಾರ್ಮಿಕರು, ಯಂತ್ರಕಾರರು ಮತ್ತು ಸಾಮಾನ್ಯ ಜನರು ರಚಿಸಿದ ತಳಹಂತದ ನಾವೀನ್ಯತೆಗಳನ್ನು ಗುರುತಿಸಿ, ವ್ಯಾಖ್ಯಾನಿಸಲು ಮತ್ತು ಅವುಗಳಿಗೆ ಮೌಲ್ಯವನ್ನು ದೊರಕಿಸುವ ಮೂಲಕ ವಾಣಿಜ್ಯೀಕರಣಕ್ಕೆ ಬೆಂಬಲವನ್ನು ನೀಡುವ ಯೋಜನೆಗೆ ಐದು ಕೋಟಿ ರೂ. ಒದಗಿಸಲಾಗುವುದು.

Exit mobile version