ಬೆಂಗಳೂರು: ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಬಜೆಟ್‌ನಲ್ಲಿ ಒಟ್ಟು 57,910 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಹಾಗಾದರೆ ಸರ್ಕಾರ 2023-24ರಲ್ಲಿ ರಾಜ್ಯದಲ್ಲಿ ಎಷ್ಟರಮಟ್ಟಿಗೆ ತೆರಿಗೆ ಸಂಗ್ರಹ ಆಗಬಹುದು ಎಂದು ನಿರೀಕ್ಷಿಸಿದೆ? ( karnataka budget 2023) ಈ ಬಗ್ಗೆ ಬಜೆಟ್‌ನಲ್ಲಿ ಅಂದಾಜು ಲೆಕ್ಕಾಚಾರವನ್ನು ನೋಡಬಹುದು. ವಿವರ ಇಲ್ಲಿದೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಬಜೆಟ್‌ಗೆ ಹೋಲಿಸಿದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆರಿಗೆ ಸಂಗ್ರಹದ ಗುರಿಯನ್ನು ಹೆಚ್ಚಿಸಿದೆ.
ವಾಣಿಜ್ಯ ತೆರಿಗೆ ಇಲಾಖೆಗೆ ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ:
ಇದೇ ಮೊದಲ ಬಾರಿಗೆ ವಾಣಿಜ್ಯ ತೆರಿಗೆ ಇಲಾಖೆಗೆ 1,01,000 ಕೋಟಿ ರೂ. ತೆರಿಗೆ ಸಂಗ್ರಹದ ಟಾರ್ಗೆಟ್ ನೀಡಲಾಗಿದೆ. ಹೀಗಾಗಿ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯ ಮೇಲೆ ಬಹು ದೊಡ್ಡ ಜವಾಬ್ದಾರಿ ಬಿದ್ದಿದೆ. ಹಾಗಾದರೆ ಏನಿದು ವಾಣಿಜ್ಯ ತೆರಿಗೆ? ಇದರಲ್ಲಿ ಯಾವ್ಯಾವುದು ಬರುತ್ತದೆ? ವಾಣಿಜ್ಯ ತೆರಿಗೆಯಲ್ಲಿ ಸರಕು ಮತ್ತು ಸೇವೆಗಳ ಮೇಲೆ ಸೇಲ್ಸ್, ಖರೀದಿ, ವಿನಿಮಯಕ್ಕೆ ಹಾಕುವ ತೆರಿಗೆಗಳು ಬರುತ್ತದೆ. ಜಿಎಸ್‌ಟಿ ಕೂಡ ವಾಣಿಜ್ಯ ತೆರಿಗೆಯ ಭಾಗವಾಗಿದೆ.
ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಅಬಕಾರಿ ಇಲಾಖೆಗೆ 36,000 ಕೋಟಿ ರೂ. ಗುರಿ: ಅಬಕಾರಿ ಇಲಾಖೆಗೆ 2023-24ರಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದೆ. ಮೋಟಾರು ವಾಹನ ತೆರಿಗೆ 11,500 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವಾಗಿ 25,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ಇತರ ತೆರಿಗೆ ಮೂಲಗಳಿಂದ 2153 ಕೋಟಿ ರೂ. ಸಂಗ್ರಹವಾಗುವ ಅಂದಾಜಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ, 2023-24ರಲ್ಲಿ 97,000 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷಿಸಲಾಗಿತ್ತು. ಅಬಕಾರಿ ಸುಂಕವಾಗಿ 35,000 ಕೋಟಿ ರೂ, ನೋಂದಣಿ ಮತ್ತು ಮುದ್ರಾಂಕ ಶುಲ್ಕವಾಗಿ 19,000 ಕೋಟಿ ರೂ, ಮೋಟಾರು ವಾಹನ ತೆರಿಗೆಯಾಗಿ 10,500 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷಿಸಲಾಗಿದೆ
ಬಜೆಟ್‌ನಲ್ಲಿ ತೆರಿಗೆ ಪ್ರಸ್ತಾವನೆಗಳು:
ರಾಜ್ಯವು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 21 ರಷ್ಟು ಅತ್ಯಧಿಕ ಬೆಳವಣಿಗೆ ದರವನ್ನು ಸಾಧಿಸಿದೆ. ಪ್ರಸ್ತುತ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ಕೆ.ಜಿ.ಎಸ್.ಟಿ ರಾಜಸ್ವ ಸಂಗ್ರಹವು 18,962 ಕೋಟಿ ರೂ.ಗಳಾಗಿರುತ್ತದೆ ಎಂದು ಬಜೆಟ್ ತಿಳಿಸಿದೆ.
ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕವನ್ನು ನೀಡಲು, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ಶೀಘ್ರದಲ್ಲಿ ಕಾರ್ಯೋನ್ಮುಖಗೊಳಿಸಲಾಗುವುದು. ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲಾಗುವುದು.
ದತ್ತಾಂಶ ವಿಶ್ಲೇಷಣೆಗಾಗಿ ಮತ್ತು ರಾಜಸ್ವ ಸಂಗ್ರಹಣೆಯನ್ನು ವೃದ್ಧಿಗೊಳಿಸಲು ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. 2023-24ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿಯನ್ನು 1,01,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ (ಅ) ರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇ.20ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಹಾಗೆಯೇ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ರಿಂದ ಶೇ.185ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ : 2018-19ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ದಿನಾಂಕ:01.01.2019 ರಿಂದ ಜಾರಿಗೆ ತರಲಾಗಿತ್ತು. ನಂತರದಲ್ಲಿ ಕೋವಿಡ್-19 ಕಾರಣದಿಂದ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಜಾರಿಗೆ ತರಲು ಉದ್ದೇಶಿಸಲಾಗಿದೆ.
2023-24ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 25,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ. ಸಾರಿಗೆ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಸರಳೀಕರಿಸಲು ಉದ್ದೇಶಿಸಿದೆ. ಮೋಟಾರು ವಾಹನ ತೆರಿಗೆ ವ್ಯವಹಾರಗಳ ನಿಖರವಾದ ಪರಿಶೀಲನೆಗಾಗಿ ಸರಳೀಕೃತ ತಂತ್ರಾಂಶವನ್ನು ತರಲಾಗುವುದು. ಪ್ರಸ್ತುತ ಆಯ್ದ ವಾಹನದ ವರ್ಗಗಳಿಗೆ ವಿಧಿಸುವ ತೆರಿಗೆಯನ್ನು ಪರಿಷ್ಕರಿಸಲಾಗುವುದು. 2023-24ನೇ ಆರ್ಥಿಕ ವರ್ಷಕ್ಕೆ ಸಾರಿಗೆ ಇಲಾಖೆಗೆ ಒಟ್ಟು 11,500 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ. ಗಣಿ ಮತ್ತು ಭೂವಿಜ್ಞಾನ : 2023-24ನೇ ಸಾಲಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 9,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಬಜೆಟ್ ಗಾತ್ರ: 2023-24ನೇ ಸಾಲಿನಲ್ಲಿ ರಾಜಸ್ವ ಜಮೆಗಳು 2,38,410 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು ಜಿ.ಎಸ್.ಟಿ. ಪರಿಹಾರ ಒಳಗೊಂಡಂತೆ 1,75,653 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 12,500 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂ.ಗಳನ್ನು ಹಾಗೂ 13,005 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 85,818 ಕೋಟಿ ರೂ.ಗಳ ಒಟ್ಟು ಸಾಲಗಳು, 23 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 228 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು ಜಮೆಗಳು 3,24,478 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
2023-24ನೇ ಸಾಲಿನಲ್ಲಿ ಒಟ್ಟು 2,50,933 ಕೋಟಿ ರೂ.ಗಳ ರಾಜಸ್ವ ವೆಚ್ಚ, 54,374 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,27,747 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.