ಮುಂಬಯಿ: ಕಳೆದ ವರ್ಷ ಸಂಚಲನ ಮೂಡಿಸಿದ್ದ ಎಲ್‌ಐಸಿಯ ಐಪಿಒದಲ್ಲಿ ಹೂಡಿಕೆ ಮಾಡಿದ್ದವರಿಗೆ ಕಳೆದೊಂದು ವರ್ಷದಲ್ಲಿ ಭಾರಿ ನಿರಾಸೆಯಾಗಿದೆ. (LIC Stock) ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ನಷ್ಟದ ಆಘಾತ ಎದುರಿಸುವಂತಾಗಿದೆ. (Life Insurance Corporation India-LIC)
2022ರ ಮೇ 17ರಂದು ಎಲ್‌ಐಸಿ ಷೇರು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿತ್ತು. ಐಪಿಒ ದರ ಪ್ರತಿ ಷೇರಿಗೆ 949 ರೂ. ಆಗಿತ್ತು. ಈ ಮಟ್ಟದಿಂದ ದರದಲ್ಲಿ 40% ಇಳಿಕೆಯಾಗಿದೆ. ಇದರ ಪರಿಣಾಮ ಎಲ್‌ಐಸಿಯ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು 2.5 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಸರ್ಕಾರ ಈಗಲೂ ಎಲ್‌ಐಸಿಯಲ್ಲಿ 96.5% ಷೇರು ಪಾಲನ್ನು ಹೊಂದಿದೆ. ಮ್ಯೂಚುವಲ್ ಫಂಡ್‌ಗಳು ಮತ್ತು ಎಫ್‌ಐಐಗಳು ಎಲ್‌ಐಸಿಯಲ್ಲಿ ಕಳೆದೊಂದು ವರ್ಷದಲ್ಲಿ ಹೂಡಿಕೆಯನ್ನು ತಗ್ಗಿಸಿವೆ. ಎಲ್‌ಐಸಿಯಲ್ಲಿ ರಿಟೇಲ್ ಹೂಡಿಕೆದಾರರ ಸಂಖ್ಯೆಯೂ ಇಳಿದಿದೆ.
ಇದನ್ನೂ ಓದಿ: Adani stocks : ಇತರ ಕಂಪನಿಗಳ ಷೇರುಗಳಲ್ಲಿ ತನ್ನ ಹೂಡಿಕೆಗೆ ಮಿತಿ ವಿಧಿಸಲು ಎಲ್‌ಐಸಿ ನಿರ್ಧಾರ
ಎಲ್‌ಐಸಿಯಲ್ಲಿ ಈಗ 33 ಲಕ್ಷ ರಿಟೇಲ್ ಹೂಡಿಕೆದಾರರು ಇದ್ದು, ಕಳೆದ ಒಂದು ವರ್ಷದಲ್ಲಿ 6.87 ಲಕ್ಷ ಮಂದಿ ನಿರ್ಗಮಿಸಿದ್ದಾರೆ. ಇನ್ನೂ ಅನೇಕ ಹೂಡಿಕೆದಾರರು ಹೂಡಿಕೆಯಲ್ಲಿ ಸರಾಸರಿ ನಷ್ಟ ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ.
21,000 ಕೋಟಿ ರೂ. ಗಾತ್ರದ ಎಲ್‌ಐಸಿ ಐಪಿಒ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇದುವರೆಗಿನ ಅತಿ ದೊಡ್ಡ ಐಪಿಒ ಆಗಿದೆ. ಹೊಸ ಹೂಡಿಕೆದಾರರನ್ನು ಆರಂಭದಲ್ಲಿ ಆಕರ್ಷಿಸಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಉಂಟಾಗಿರುವ ಷೇರು ದರ ಕುಸಿತದ ಪರಿಣಾಮ ಲಕ್ಷಾಂತರ ರಿಟೇಲ್ ಹೂಡಿಕೆದಾರರು ನಷ್ಟಕ್ಕೀಡಾಗಿದ್ದಾರೆ. ಈಗ ಎಲ್‌ಐಸಿ ಷೇರು ದರ 568 ರೂ.ಗಳಾಗಿದೆ.