ನವ ದೆಹಲಿ: ಹಿಂಡೆನ್ ಬರ್ಗ್‌ನ ವರದಿ ಎಬ್ಬಿಸಿದ ಕೋಲಾಹಲಗಳಿಗೆ ಸೊಪ್ಪು ಹಾಕದ ವಿಮೆ ದಿಗ್ಗಜ ಭಾರತೀಯ ವಿಮೆ ನಿಗಮ (Life Insurance Corporation of India-LIC) ಅದಾನಿ ಸಮೂಹದ ಪ್ರವರ್ತಕ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ತನ್ನ ಷೇರುಗಳನ್ನು ಹೆಚ್ಚಿಸಿದೆ. 357,500 ಷೇರುಗಳನ್ನು ಖರೀದಿಸಿದೆ. ಇದರಿಂದಾಗಿ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಐಸಿಯ ಷೇರು ಪಾಲು 4.23%ರಿಂದ 4.26%ಕ್ಕೆ ಏರಿಕೆಯಾಗಿದೆ.
ಅದಾನಿ ಗ್ರೂಪ್ ಕಂಪನಿಗಳಲ್ಲಿ ಎಲ್‌ಐಸಿಯ ಹೂಡಿಕೆಯು 2023ರ ಜನವರಿ ಅಂತ್ಯಕ್ಕೆ 30,127 ಕೋಟಿ ರೂ.ನಷ್ಟಿತ್ತು. ಹಿಂಡೆನ್ ಬರ್ಗ್ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಗಳ ಷೇರು ದರ ಇಳಿದಿತ್ತು. ಇದು ರಾಜಕೀಯವಾಗಿಯೂ ವಿವಾದ ಸೃಷ್ಟಿಸಿತ್ತು. ಅದಾನಿ ಕಂಪನಿಗಳಲ್ಲಿ ಎಲ್‌ಐಸಿಯ ಹೂಡಿಕೆ ವಿರುದ್ಧ ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿತ್ತು. ಇದರಿಂದಾಗಿ ಎಲ್‌ಐಸಿಗೆ ನಷ್ಟ ಸಂಭವಿಸಿದೆ ಎಂದು ಆರೋಪಿಸಲಾಗಿತ್ತು.
ಆದರೆ ಈ ಆರೋಪಗಳನ್ನು ಎಲ್‌ಐಸಿ ನಿರಾಕರಿಸಿತ್ತು. ಎಸ್‌ಬಿಐ ಮತ್ತು ಎಲ್‌ಐಸಿಗೆ ಅದಾನಿ ಗ್ರೂಪ್ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ. ಆದರೆ ತನ್ನ ಒಟ್ಟು ಆಸ್ತಿಯಲ್ಲಿ 1%ಗಿಂತಲೂ ಕಡಿಮೆ ಮೊತ್ತವನ್ನು ಅದಾನಿ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ. ಅದಾನಿ ಟ್ರಾನ್ಸ್‌ಮಿಶನ್, ಅದಾನಿ ಗ್ರೀನ್, ಅದಾನಿ ಟೋಟಲ್ ಗ್ಯಾಸ್‌ನಲ್ಲೂ ಷೇರುಗಳನ್ನು ಹೆಚ್ಚಿಸಿದೆ.
ಹಿಂಡೆನ್ ಬರ್ಗ್ ಸ್ಫೋಟಕ ವರದಿಯ ಬಳಿಕ ನೆಲಕಚ್ಚಿದ್ದ ಅದಾನಿ ಗ್ರೂಪ್ ಕಂಪನಿಗಳ ಷೇರು ದರ ಚೇತರಿಸುತ್ತಿದ್ದು, ಸೋಮವಾರ ಸಮೂಹದ ಎಲ್ಲ ಕಂಪನಿಗಳ ಷೇರು ದರಗಳೂ (Adani stocks) ಲಾಭ ದಾಖಲಿಸಿವೆ. (Adani stocks ) ಕೆಲವು ಷೇರುಗಳು ಅಪ್ಪರ್ ಸರ್ಕ್ಯೂಟ್ ಲಿಮಿಟ್ ಮುಟ್ಟಿವೆ.
ಬಿಎಸ್‌ಇನಲ್ಲಿ ಸೋಮವಾರ ಅದಾನಿ ಟ್ರಾನ್ಸ್‌ಮಿಶನ್ ಷೇರು ದರ 5%, ಅದಾನಿ ಗ್ರೀನ್ ಎನರ್ಜಿ 5%, ಅದಾನಿ ಟೋಟಲ್ ಗ್ಯಾಸ್ 5%, ಅದಾನಿ ಎಂಟರ್‌ಪ್ರೈಸ್ 2.53% ಲಾಭ ಗಳಿಸಿತು. ಎಸಿಸಿ 1.63%, ಅದಾನಿ ಪೋರ್ಟ್ಸ್ (1.57%), ಅದಾನಿ ಪವರ್ (0.96%), ಎನ್‌ಡಿಟಿವಿ (0.18%), ಅಂಬುಜಾ ಸಿಮೆಂಟ್ (0.17%), ಅದಾನಿ ವಿಲ್ಮರ್ (0.17%) ಷೇರು ದರ ಏರಿತು. ಅದಾನಿ ಸಮೂಹದ ಮೂರು ಕಂಪನಿಗಳ ಷೇರು ದರ ಸೋಮವಾರ ಅಪ್ಪರ್ ಸರ್ಕ್ಯೂಟ್ ಮಿತಿ ಮುಟ್ಟಿತು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಫೋರ್ಬ್ಸ್ ಸಂಸ್ಥೆ ಬಿಡುಗಡೆಗೊಳಿಸಿರುವ 2023ರ ವಿಶ್ವದ ಪ್ರಮುಖ ಬಿಲಿಯನೇರ್‌ಗಳ (forbes Worlds Billionaires List 2023) ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದ್ದಾರೆ. ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ ಅವರು 24ಕ್ಕೆ ಕುಸಿದಿದ್ದಾರೆ.