Site icon Vistara News

Loan Recovery : ಸಾಲದ ರಿಕವರಿಯಲ್ಲಿ ಮಾನವೀಯತೆ ಇರಲಿ: ಬ್ಯಾಂಕ್‌ಗಳಿಗೆ ವಿತ್ತ ಸಚಿವೆ ಸೂಚನೆ

cash

ನವ ದೆಹಲಿ: ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು ಸಾಲ ವಸೂಲಾತಿಯಲ್ಲಿ ಕಠೋರ ಕ್ರಮಗಳನ್ನು ಕೈ ಬಿಡಬೇಕು. ಮಾನವೀಯತೆ ಮತ್ತು ಸೂಕ್ಷ್ಮ ಸಂವೇದನೆಯಿಂದ ಸಾಲದ ರಿಕವರಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕೆಲವು ಬ್ಯಾಂಕ್‌ಗಳು ನಿರ್ದಾಕ್ಷಿಣ್ಯವಾಗಿ ಉಗ್ರ ಕ್ರಮಗಳ ಮೂಲಕ ಸಾಲದ ಮರು ವಸೂಲಾತಿ ಕೈಗೊಂಡಿರುವ ಬಗ್ಗೆ ದೂರುಗಳನ್ನು ಗಮನಿಸಿದ್ದೇನೆ. ಆದರೆ ಸಾಲ ವಸೂಲಾತಿಯ ವಿಚಾರದಲ್ಲಿ ಮಾನವೀಯತೆ ಮತ್ತು ಸೂಕ್ಷ್ಮ ಸಂವೇದನೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ಗಳು ಖಾಸಗಿ ರಿಕವರಿ ಏಜೆಂಟರ ಮೂಲಕ ಬಲವಂತವಾಗಿ ಸಾಲ ಮರು ವಸೂಲಾತಿ ಮಾಡಬಾರದು. ಗ್ರಾಹಕರಿಗೆ ಕಿರುಕುಳ ನೀಡಬಾರದು. ತೋಳ್ಬಲವನ್ನು ಪ್ರಯೋಗಿಸಬಾರದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2008ರಲ್ಲಿ ಬ್ಯಾಂಕ್‌ಗಳಿಗೆ ಈ ಬಗ್ಗೆ ಎಚ್ಚರಿಸಿತ್ತು. ಸಾಲದ ರಿಕವರಿಯನ್ನು ಬಲವಂತವಾಗಿ, ರಿಕವರಿ ಏಜೆಂಟರ ಮೂಲಕ ಕಿರುಕುಳ ಕೊಟ್ಟು ಮಾಡಿಸಿದರೆ, ಅಂಥ ಬ್ಯಾಂಕ್‌ ಅನ್ನು ನಿಷೇಧಿಸಲಾಗುವುದು ಎಂದು ಆರ್‌ಬಿಐ ಎಚ್ಚರಿಸಿತ್ತು.

ಆರ್‌ಬಿಐ ಈ ವರ್ಷ ಆರ್‌ಬಿಎಲ್‌ ಬ್ಯಾಂಕ್‌ಗೆ 2.27 ಕೋಟಿ ರೂ. ದಂಡ ವಿಧಿಸಿತ್ತು. ರಿಕವರಿ ಏಜೆಂಟರನ್ನು ನೇಮಿಸುವಾಗ ಬ್ಯಾಂಕ್‌ ಕೆಲವು ನಿಯಮಗಳನ್ನು ಪಾಲಿಸಿರಲಿಲ್ಲ. ಹಲವಾರು ಕೋಪರೇಟಿವ್‌ ಬ್ಯಾಂಕ್‌ಗಳಿಗೂ ಆರ್‌ಬಿಐ ಈ ರೀತಿ ದಂಡ ವಿಧಿಸಿದೆ.

Exit mobile version