ಕೋಟಾ: ರಾಜಸ್ಥಾನದ ಕೋಟಾ ಮೂಲದ ವ್ಯಕ್ತಿಯೊಬ್ಬ ರೈಲ್ವೆ ಇಲಾಖೆಯಿಂದ ತನಗೆ ಬರಬೇಕಾಗಿದ್ದ 35 ರೂ.ಗಳನ್ನು ಪಡೆಯಲು ಸತತ 5 ವರ್ಷಗಳ ಕಾಲ ಹೋರಾಡಿ ಜತ ಗಳಿಸಿದ್ದಾನೆ. ವಿಶೇಷ ಎಂದರೆ ಇದರಿಂದ ಒಟ್ಟು 3 ಲಕ್ಷ ಮಂದಿಗೆ ಲಾಭವಾಗಿದೆ. ಇದು ಹೇಗೆ ಎನ್ನುತ್ತೀರಾ.
ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ, 5 ವರ್ಷಗಳ ಹಿಂದೆ, 2017ರ ಏಪ್ರಿಲ್‌ನಲ್ಲಿ ಕೋಟಾದಿಂದ ದಿಲ್ಲಿಗೆ ಪ್ರಯಾಣಿಸಲು ರೈಲ್ವೆ ಟಿಕೆಟ್ ಖರೀದಿಸಿದ್ದರು. 2017ರ ಜುಲೈ 2ರಂದು ರೈಲು ಹೊರಡಲಿತ್ತು. ಜುಲೈ 2ರಂದೇ ಜಿಎಸ್‌ಟಿ ಜಾರಿಯಾಗಿತ್ತು. ಹಳೆಯ ಸೇವಾ ತೆರಿಗೆ ರದ್ದಾಗಿತ್ತು. ಆದರೆ ಕಾರಣಾಂತರಗಳಿಂದ ಸುಜೀತ್ ಸ್ವಾಮಿ ತಾವು ಬುಕ್ ಮಾಡಿದ್ದ 756ರೂ.ಗಳ ಟಿಕೆಟ್ ಅನ್ನು ರದ್ದುಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಇಲಾಖೆಯು 665 ರೂ.ಗಳನ್ನು ಹಿಂತಿರುಗಿಸಿತ್ತು. ಈ 100 ರೂ.ಗಳ ಕಡಿತದಲ್ಲಿ ಸೇವಾ ತೆರಿಗೆ ಹೆಸರಿನಲ್ಲಿ ಹೆಚ್ಚುವರಿ 35 ರೂ. ಪಡೆಯಲಾಗಿದೆ. ಹೀಗಾಗಿ ಹೆಚ್ಚುವರಿಯಾಗಿ ಸಂಗ್ರಹಿಸಿರುವ 35 ರೂ.ಗಳನ್ನು ಹಿಂತಿರುಗಿಸಬೇಕು ಎಂದು ಇಲಾಖೆಗೆ ಮನವಿ ಸಲ್ಲಿಸಿದ್ದರು. ಸುಮಾರು 50 ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿದ್ದರು. ನಾಲ್ಕು ಇಲಾಖೆಗಳಿಗೆ ಪತ್ರಗಳನ್ನು ಬರೆದಿದ್ದರು.
ಕೊನೆಗೂ ರೈಲ್ವೆ ಇಲಾಖೆ ಸ್ಪಂದಿಸಿದೆ. ಜತೆಗೆ ಐಆರ್‌ಸಿಟಿಸಿ, 2.98 ಲಕ್ಷ ಬಳಕೆದಾರರು ತಾವು ರದ್ದುಪಡಿಸಿದ್ದ ಟಿಕೆಟ್‌ಗೆ ಸಂಬಂಧಿಸಿದ ರಿಫಂಡ್ ಮೊತ್ತವಾಗಿ ಒಟ್ಟು 2.43 ಕೋಟಿ ರೂ.ಗಳನ್ನು ಹಿಂತಿರುಗಿಸಲಿದೆ ಎಂದು ಸ್ವಾಮಿ ತಿಳಿಸಿದ್ದಾರೆ. ಆರ್ ಟಿಐ ಮೂಲಕ ಅವರು ಕೇಳಿದ ಪ್ರಶ್ನೆಗೆ ಇಲಾಖೆ ಈ ವಿವರಗಳನ್ನು ನೀಡಿದೆ.
ನಾನು ನಿರಂತರವಾಗಿ ರಿಫಂಡ್ ಸಲುವಾಗಿ ಪ್ರಧಾನಿ, ರೈಲ್ವೆ ಸಚಿವರು, ಜಿಎಸ್‌ಟಿ ಮಂಡಳಿ, ಹಣಕಾಸು ಸಚಿವರಿಗೆ ಟ್ವೀಟ್ ಮಾಡಿದ್ದೆ. ಪತ್ರ ಬರೆದಿದ್ದೆ. ಇದರಿಂದ 2.98 ಲಕ್ಷ ಬಳಕೆದಾರರಿಗೆ ತಲಾ 35 ರೂ. ರಿಫಂಡ್ ಆಗುವಲ್ಲಿ ಸಹಕಾರವಾಯಿತು ಎಂದು ಸ್ವಾಮಿ ವಿವರಿಸಿದ್ದಾರೆ.