Site icon Vistara News

MB Patil: ವಿಜಯಪುರ ಜಿಲ್ಲೆಗೆ 36 ಸಾವಿರ ಕೋಟಿ ಹೂಡಿಕೆ ತಂದ ಸಚಿವ ಎಂ.ಬಿ. ಪಾಟೀಲ್!

Minister MB Patil has brought rs 36000 investment to Vijayapura district

ಬೆಂಗಳೂರು: ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಅವರು ತಮ್ಮ ತವರು ಜಿಲ್ಲೆ ವಿಜಯಪುರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪವನ ವಿದ್ಯುತ್‌ ಮತ್ತು ಸೌರ ವಿದ್ಯುತ್‌ ಕ್ಷೇತ್ರಗಳ ಕಂಪನಿಗಳಿಂದ ಒಟ್ಟು 36 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ತಂದಿದ್ದಾರೆ. ಸುಜ್ಲಾನ್‌ ಮತ್ತು ರೆನೈಸಾನ್ಸ್‌ ಕಂಪನಿಗಳ ಉನ್ನತಾಧಿಕಾರಿಗಳ ಜತೆ ಮಂಗಳವಾರ ಈ ಸಂಬಂಧ ಮಾತುಕತೆಯನ್ನು ನಡೆಸಲಾಗಿದೆ.

ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್‌, ʻಸುಜ್ಲಾನ್‌ ಕಂಪನಿಯು ಪವನ ವಿದ್ಯುತ್‌ ಕ್ಷೇತ್ರಕ್ಕೆ ಅಗತ್ಯವಿರುವ 160 ಮೀಟರ್‌ ಎತ್ತರದ ಕಂಬಗಳು ಮತ್ತು 70 ಮೀಟರ್‌ ಉದ್ದದ ಬೃಹತ್‌ ಬ್ಲೇಡುಗಳ ಉತ್ಪಾದನೆಗೆ ಹೆಸರಾಗಿದ್ದು, ವಿಜಯಪುರದಲ್ಲಿ ಹಂತಹಂತವಾಗಿ 30 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ. ಮೊದಲ ಹಂತದಲ್ಲಿ ಕಂಪನಿಯು ಬ್ಲೇಡುಗಳ ತಯಾರಿಕಾ ಘಟಕ ಆರಂಭಿಸಲು ತೀರ್ಮಾನಿಸಿದ್ದು, 100 ಎಕರೆ ಜಮೀನನ್ನು ಕೇಳಿದೆ. ಇದು ವಿಜಯಪುರ ಜಿಲ್ಲೆಗೆ ಹರಿದು ಬರಲಿರುವ ಬೃಹತ್‌ ಹೂಡಿಕೆಯಾಗಲಿದೆʼ ಎಂದರು.

ಈಗಾಗಲೇ ನಡೆಸಿರುವ ಅಧ್ಯಯನಗಳ ಪ್ರಕಾರ ಇಡೀ ದೇಶದಲ್ಲಿ ವಿಜಯಪುರ, ಆಂಧ್ರಪ್ರದೇಶದ ಅನಂತಪುರ ಮತ್ತು ರಾಜಸ್ಥಾನದ ಜೈಸಲ್ಮೇರ್‌ ಮಾತ್ರ ಪವನ ವಿದ್ಯುತ್‌ ಉತ್ಪಾದನೆಗೆ ಅತ್ಯಂತ ಪ್ರಶಸ್ತ ತಾಣಗಳೆಂದು ಗೊತ್ತಾಗಿದೆ. ಅನಂತಪುರ ಮತ್ತು ಜೈಸಲ್ಮೇರ್‌ಗಳಲ್ಲಿ ಸುಜ್ಲಾನ್‌ ಕಂಪನಿಯು ಈಗಾಗಲೇ ಕ್ರಮವಾಗಿ 2,000 ಮತ್ತು 3,000 ಮೆಗಾವ್ಯಾಟ್‌ ಉತ್ಪಾದನಾ ಸಾಮರ್ಥ್ಯದ ಪವನ ವಿದ್ಯುತ್‌ ಘಟಕಗಳನ್ನು ಹೊಂದಿದೆ. ವಿಜಯಪುರದಲ್ಲಿ ಕಂಪನಿಯು 5,000 ಮೆಗಾವ್ಯಾಟ್‌ ಸಾಮರ್ಥ್ಯದ ಘಟಕವನ್ನು ಪ್ರಾರಂಭಿಸಲಿದ್ದು, ಇದು ದೇಶದಲ್ಲೇ 2ನೇ ಅತಿ ದೊಡ್ಡ ಪವನ ವಿದ್ಯುತ್‌ ಘಟಕವಾಗಿರಲಿದೆ ಎಂದು ಎಂ.ಬಿ. ಪಾಟೀಲ್‌ ತಿಳಿಸಿದರು.

ಒಡಂಬಡಿಕೆ ಆಗಬೇಕಿದೆ

ಸುಜ್ಲಾನ್‌ ಕಂಪನಿಯು ಇಲ್ಲಿ ತಯಾರಿಸಲಿರುವ ಕಂಬ ಮತ್ತು ಬ್ಲೇಡುಗಳನ್ನು ಸ್ಥಳೀಯವಾಗಿಯೇ ಬಳಸಲಿದೆ. ಕಂಪನಿಗೆ ಅಗತ್ಯವಿರುವ 100 ಎಕರೆ ಜಮೀನನ್ನು ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಕೊಡಲು ಏನೂ ಸಮಸ್ಯೆ ಇಲ್ಲ. ಅಕಸ್ಮಾತ್‌ ಕಂಪನಿಯು ಜಿಲ್ಲೆಯ ಬೇರೆಡೆಗಳಲ್ಲಿ ತನಗೆ ಅಗತ್ಯವಿರುವ ಸೂಕ್ತ ಭೂಮಿ ಲಭ್ಯವಿದೆ ಎಂದು ಭಾವಿಸಿದರೆ, ಅಷ್ಟು ಪ್ರಮಾಣದ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಕೊಡಲಾಗುವುದು. ಒಟ್ಟಿನಲ್ಲಿ ಈ ಕಂಪನಿಯು ವಿಜಯಪುರಕ್ಕೆ ಬರಬೇಕು ಎನ್ನುವುದು ಸರ್ಕಾರದ ಗುರಿಯಾಗಿದ್ದು, ಇದಕ್ಕಾಗಿ ʻಬಿಯಾಂಡ್‌ ಬೆಂಗಳೂರುʼ ಉಪಕ್ರಮದಡಿ ಇರುವ ಸೌಲಭ್ಯ, ಪ್ರೋತ್ಸಾಹಗಳನ್ನೆಲ್ಲ ಕೊಡಲಾಗುವುದು. ಇದಕ್ಕೆ ಕಂಪನಿಯ ಸಿಇಒ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಅಂತಿಮವಾಗಿ ಒಡಂಬಡಿಕೆಗೆ ಸಹಿ ಹಾಕಲಾಗುವುದು ಎಂದು ಎಂ.ಬಿ. ಪಾಟೀಲ್‌ ಮಾಹಿತಿ ನೀಡಿದರು.

ರೆನೈಸಾನ್ಸ್‌ ಕಂಪನಿಯಿಂದ 6,000 ಸಾವಿರ ಕೋಟಿ ರೂ. ಹೂಡಿಕೆ

ಇದಲ್ಲದೆ, ಸೌರ ಫಲಕಗಳ (ಸೋಲಾರ್‌ ಪ್ಯಾನೆಲ್ಸ್)‌ ತಯಾರಿಕೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಹೆಸರಾಗಿರುವ ರೆನೈಸಾನ್ಸ್‌ ಸೋಲಾರ್‌ ಮತ್ತು ಎಲೆಕ್ಟ್ರಾನಿಕ್‌ ಮೆಟೀರಿಯಲ್ಸ್‌ ಕಂಪನಿ ಕೂಡ ವಿಜಯಪುರದಲ್ಲಿ ತನ್ನ ಘಟಕ ಆರಂಭಿಸಲು 6,000 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ಈ ಸಂಬಂಧ ಕಂಪನಿಯ ಸಿಇಒ ಮಿಲಿಂದ್‌ ಕುಲಕರ್ಣಿ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಕಂಪನಿ ಕೂಡ ತನಗೆ 100 ಎಕರೆ ಜಮೀನು, 80 ಮೆಗಾವ್ಯಾಟ್‌ ವಿದ್ಯುತ್‌ ಮತ್ತು ಪ್ರತಿನಿತ್ಯ 10 ಎಂಎಲ್‌ಡಿ ನೀರಿನ ಅಗತ್ಯವಿದೆ ಎಂದು ತಿಳಿಸಿದೆ. ಜಮೀನು ಮತ್ತು ವಿದ್ಯುತ್ತಿಗೆ ಜಿಲ್ಲೆಯಲ್ಲಿ ಸಮಸ್ಯೆಯೇನೂ ಇಲ್ಲ. ಆಲಮಟ್ಟಿ ಅಣೆಕಟ್ಟೆಯಿಂದ ಕಂಪನಿಗೆ ಅಗತ್ಯವಿರುವಷ್ಟು ನೀರನ್ನೂ ಕೊಡಬಹುದು. ಕಂಪನಿಯು ಆರಂಭದಲ್ಲಿ 2,500 ಕೋಟಿ ರೂ. ಹಣ ಹೂಡಲಿದ್ದು, 5,000 ಮೆಗಾವ್ಯಾಟ್‌ ಸಾಮರ್ಥ್ಯದ ಘಟಕವನ್ನು (ಕ್ರಿಸ್ಟಲ್‌ ಗ್ರೋತ್‌ & ವೇಫರಿಂಗ್‌ ಯೂನಿಟ್)‌ ಆರಂಭಿಸಲಿದೆ. 2025ರ ಕೊನೆಯ ಹೊತ್ತಿಗೆ ತನ್ನ ವಾಣಿಜ್ಯ ಚಟುವಟಿಕೆ ಆರಂಭಿಸಲು ಉದ್ದೇಶಿಸಲಿದೆ. ಇದರಿಂದ 1 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಎಂ.ಬಿ. ಪಾಟೀಲ್‌ ವಿವರಿಸಿದರು.

ರೆನೈಸಾನ್ಸ್‌ ಕಂಪನಿಯು 2030ರ ಹೊತ್ತಿಗೆ ತನ್ನ ಘಟಕವನ್ನು 20 ಸಾವಿರ ಮೆಗಾವ್ಯಾಟ್‌ ಮಟ್ಟಕ್ಕೆ ಕೊಂಡೊಯ್ಯುವ ನೀಲನಕಾಶೆಯನ್ನು ಹೊಂದಿದೆ. ಆಗ 3,000ಕ್ಕೂ ಹೆಚ್ಚು ಜನರಿಗೆ ಇಲ್ಲಿ ಉದ್ಯೋಗ ಸಿಗಲಿದೆ. ಕಂಪನಿಯು ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಕೂಡ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸಿದ್ದು, ಅಂತಿಮವಾಗಿ ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

ಇದನ್ನೂ ಓದಿ: Anantkumar Hegde: ಮಾಧ್ಯಮಗಳಿಗೆ ನಾಯಿ ಎಂದರೇ ಅನಂತ್‌ ಕುಮಾರ್‌? ಪತ್ರಕರ್ತರ ಸಂಘದಿಂದ ಬಿಜೆಪಿ ಹೈಕಮಾಂಡ್‌ಗೆ ದೂರು

ಸುಜ್ಲಾನ್‌ ಸಮೂಹದ ಸಿಇಒ ಜೆ ಪಿ ಚಲಸಾನಿ ಮತ್ತು ರೆನೈಸಾನ್ಸ್‌ ಸೋಲಾರ್‌ ಮತ್ತು ಎಲೆಕ್ಟ್ರಾನಿಕ್‌ ಮೆಟೀರಿಯಲ್ಸ್‌ ಕಂಪನಿಯ ಸಿಇಒ ಮಿಲಿಂದ್‌ ಕುಲಕರ್ಣಿ ಈ ಮಹತ್ವದ ಮಾತುಕತೆಗಳಲ್ಲಿ ಪಾಲ್ಗೊಂಡಿದ್ದರು. ಕೆಐಎಡಿಬಿ ಸಿಇಒ ಡಾ.ಮಹೇಶ್‌ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version