ನವ ದೆಹಲಿ: ಆನ್‌ಲೈನ್ ಮೂಲಕ ಗ್ರಾಹಕರಿಂದ ಆರ್ಡರ್ ಪಡೆದು ಆಹಾರ ವಿತರಿಸುವ ಸ್ವಿಗ್ಗಿ ಕಂಪನಿ, ತನ್ನ ಸಿಬ್ಬಂದಿಗೆ ಅಲ್ಲಿದ್ದುಕೊಂಡೇ ಎರಡನೇ ಉದ್ಯೋಗವನ್ನೂ ಜತೆಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಭಾರತದಲ್ಲಿ ಇಂಥ ಪರಿಕಲ್ಪನೆಯನ್ನು ಮೊದಲ ಬಾರಿಗೆ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದೆ.
ಈ ಹೊಸ ನೀತಿಯನ್ನು ಮೂನ್‌ಲೈಟಿಂಗ್ ಪಾಲಿಸಿ (Moonligting policy) ಎನ್ನಲಾಗುತ್ತಿದೆ. ಈ ನೀತಿಯ ಅಡಿಯಲ್ಲಿ ಸ್ವಿಗ್ಗಿ ಸಿಬ್ಬಂದಿ ಕಂಪನಿಯ ಅನುಮತಿಯ ಮೇರೆಗೆ, ಕಚೇರಿಯ ಸಮಯದ ಬಳಿಕ ಅಥವಾ ವಾರಾಂತ್ಯದಲ್ಲಿ, ಸ್ವಿಗ್ಗಿಯ ಉತ್ಪಾದಕತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಬೇರೆ ಉದ್ಯೋಗಗಳನ್ನು ಕೈಗೊಳ್ಳಬಹುದು. ಬೇರೆ ಕಂಪನಿಯಲ್ಲೂ ಕೆಲಸ ಮಾಡಬಹುದು. ಇದರ ಪರಿಣಾಮ ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ಸ್ವಿಗ್ಗಿ ತಿಳಿಸಿದೆ.
ಉದ್ಯೋಗಿಗಳ ವಲಸೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸ್ವಿಗ್ಗಿ ತನ್ನ ಸಿಬ್ಬಂದಿಗೆ ನೀಡಿರುವ ಹೊಸ ಆಫರ್ ಗಮನ ಸೆಳೆದಿದೆ. ಉದ್ಯಮ ವಲಯದಲ್ಲಿ ಇದರ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಉದ್ಯೋಗಿಗಳ ವಲಸೆಯ ಸಮಸ್ಯೆಯನ್ನು ತಪ್ಪಿಸಲು ಸ್ವಿಗ್ಗಿ ಇಂಥ ನೀತಿ ಜಾರಿಗೊಳಿಸಿರಬಹುದು ಎಂಬ ವಾದವಿದೆ. ಆದರೆ ಈ ಮೂನ್‌ಲೈಟಿಂಗ್ ಪದ್ಧತಿಗೆ ಬೇರೆ ಕಂಪನಿಗಳು ಹೇಗೆ ಸ್ಪಂದಿಸಲಿವೆ ಎಂದು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಮಾನವ ಸಂಪನ್ಮೂಲ ವಿಭಾಗದ ತಜ್ಞರು.
ಉದ್ಯೋಗಿಗಳಿಗೆ ಪ್ರಯೋಜನವೇನು?: ಉದ್ಯೋಗಿಗಳಿಗೆ ಹೆಚ್ಚಿನ ಔದ್ಯೋಗಿಕ ಸ್ವಾತಂತ್ರ್ಯ, ಕೌಶಲ ವೃದ್ಧಿಸಿಕೊಳ್ಳುವ ಅವಕಾಶ, ಹೆಚ್ಚುವರಿ ಆದಾಯ ಗಳಿಸಿಕೊಳ್ಳಲು ಮಾರ್ಗೋಪಾಯ ಸಿಗಲಿದೆ.
ಸವಾಲೇನು?: ಎಲ್ಲ ಹಂತದ ಉದ್ಯೋಗಿಗಳಿಗೆ ಈ ರೀತಿ ಮತ್ತೊಂದು ಕಡೆ ಕೆಲಸ ಮಾಡಲು ಕಷ್ಟವಾಗಬಹುದು. ಅವಕಾಶ ಸಿಗದಿರಬಹುದು. ಎರಡನೆಯದಾಗಿ ಎರಡೆರಡು ಕಡೆ ಕೆಲಸದ ಒತ್ತಡವನ್ನೂ ನಿರ್ವಹಿಸುವುದು ಹೇಗೆ ಎಂಬ ಪ್ರಶ್ನೆಯೂ ಉಂಟಾಗಬಹುದು. ಮೂರನೆಯದಾಗಿ ಈ ಆಫರ್ ನೀಡಿದ ಕಂಪನಿಯಲ್ಲಿ ವೇತನ ಕಡಿತವಾಗಬಹುದೇ ಎಂಬ ಪ್ರಶ್ನೆಯೂ ಇಲ್ಲದಿಲ್ಲ.
ಕೋವಿಡ್-೧೯ ಬಿಕ್ಕಟ್ಟಿನ ಸಂದರ್ಭ ಆತಿಥ್ಯೋದ್ಯಮ, ಟ್ರಾವೆಲ್ ವಲಯದ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನಿಯಮಗಳನ್ನು ಸಡಿಲಗೊಳಿಸಿ ಬೇರೆ ಕಡೆ ಕೆಲಸ ಮಾಡಲು ಅವಕಾಶ ನೀಡಿದ್ದವು. ಏಕೆಂದರೆ ಉದ್ಯೋಗಿಗಳ ಪೂರ್ಣ ಬಳಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಿದ್ದರೂ ಕೆಲವು ಸ್ಟಾರ್ಟಪ್‌ಗಳಲ್ಲಿ ಅನುಮತಿಯ ಮೇರೆಗೆ ಇತರ ಪ್ರಾಜೆಕ್ಟ್‌ಗಳನ್ನೂ ಕೈಗೊಳ್ಳಲು ಅವಕಾಶ ನೀಡಲಾಗುತ್ತಿದೆ. ದೊಡ್ಡ ಕಂಪನಿಗಳೂ ಇಂಥ ಆಯ್ಕೆ ಬಗ್ಗೆ ಪರಿಶೀಲಿಸುತ್ತಿವೆ ಎನ್ನುತ್ತಾರೆ ಎಚ್‌ಆರ್ ತಜ್ಞರು.