ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು (Ananth Ambani and Radhika Merchant’s wedding) ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ (businessman Mukesh Ambani) 2024ರ ಕೇಂದ್ರ ಬಜೆಟ್ (Union Budget 2024) ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದಾಗಿ ಬರೋಬ್ಬರಿ 9,200 ಕೋಟಿ ರೂ. ಕಳೆದುಕೊಂಡಿದ್ದರು!
ಕೇಂದ್ರ ಬಜೆಟ್ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಈ ಸಂದರ್ಭದಲ್ಲಿ ವಹಿವಾಟಿನಲ್ಲಿ ಗಮನಾರ್ಹವಾದ ಏರಿಳಿತಗಳು ಕಂಡುಬಂದವು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ದೇಶದ ದೊಡ್ಡ ಬಿಲಿಯನೇರ್‌ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು.
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ಈ ದಿನ ಗಣನೀಯ ಇಳಿಕೆಯಾಗಿದೆ. ಬಜೆಟ್ ದಿನದಂದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುವ ನಿರೀಕ್ಷೆ ಇತ್ತು. ಇದರಿಂದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಿತು.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅಂಬಾನಿ ಅವರ ನಿವ್ವಳ ಮೌಲ್ಯವು 1.10 ಬಿಲಿಯನ್ ಡಾಲರ್ ಅಂದರೆ ಸರಿಸುಮಾರು 9200 ಕೋಟಿ ರೂ. ಗಳಷ್ಟು ಕಡಿಮೆಯಾಗಿದೆ. ಈ ಕುಸಿತದ ಹೊರತಾಗಿಯೂ ಈ ವರ್ಷದ ಆರಂಭದಲ್ಲಿ ಅವರ ಸಂಪತ್ತು 16 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿತ್ತು.
ಕಳೆದ ಕೆಲವು ದಿನಗಳಲ್ಲಿ ಅಂಬಾನಿ ಅವರ ನಿವ್ವಳ ಮೌಲ್ಯವು 7 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಜುಲೈ 19ರಂದು ಅವರ ನಿವ್ವಳ ಮೌಲ್ಯವು 119 ಶತಕೋಟಿ ಡಾಲರ್ ಆಗಿತ್ತು. ಆದರೆ ಅದು ಈಗ 112 ಶತಕೋಟಿ ಡಾಲರ್‌ಗೆ ಇಳಿದಿದೆ ಎನ್ನಲಾಗಿದೆ.
ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್?
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇತ್ತೀಚೆಗೆ ಕುಸಿಯುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಕುಸಿತ ಉಂಟಾಗಬಹುದು ಎನ್ನಲಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಹೆಚ್ಚಳವಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ನಿವ್ವಳ ಮೌಲ್ಯವು 751 ಮಿಲಿಯನ್ ಡಾಲರ್‌ಗಳು ಅಂದರೆ ಸರಿಸುಮಾರು 63 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅವರ ಸಂಪತ್ತು 102 ಬಿಲಿಯನ್ ಡಾಲರ್ ಗಳನ್ನು ತಲುಪಿದೆ. ಈ ವರ್ಷ ಅವರ ಸಂಪತ್ತು 17.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ.