ಮುಂಬಯಿ: ಆನ್‌ಲೈನ್ ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆಯನ್ನು ಹೆಚ್ಚು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಹೊಸ ನಿಯಮಗಳನ್ನು ಜುಲೈ ೧ರಿಂದ ಜಾರಿಗೊಳಿಸಿದೆ.
ಆನ್‌ಲೈನ್ ಸಾಧನಗಳ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ವರ್ಗಾವಣೆಗಳಿಗೆ ಪೂಲ್ ಅಕೌಂಟ್‌ಗಳ (Pool accounts) ಬಳಕೆಯನ್ನು ನಿರ್ಬಂಧಿಸಲು ಸೆಬಿ ನಿರ್ಧರಿಸಿದೆ. ಪೂಲ್ ಅಕೌಂಟ್ ಎಂದರೆ ಬ್ರೋಕರ್‌ಗಳು ಒದಗಿಸುವ ಎಲೆಕ್ಟ್ರಾನಿಕ್ ವ್ಯಾಲೆಟ್ ಸೌಲಭ್ಯವಾಗಿದೆ. ವೈಯಕ್ತಿಕ ಹೂಡಿಕೆದಾರರು ಈ ವ್ಯಾಲೆಟ್‌ನಲ್ಲಿ ಹಣವನ್ನು ಜಮೆ ಮಾಡಬಹುದು. ಹಾಗೂ ನಿರ್ದಿಷ್ಟ ಮ್ಯೂಚುವಲ್ ಫಂಡ್ ಯೋಜನೆಗೆ ಹಣವನ್ನು ವರ್ಗಾಯಿಸಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು.
ಸೆಬಿಯ ಹೊಸ ನಿಯಮದ ಪ್ರಕಾರ ಈ ರೀತಿ ಪೂಲ್ ಅಕೌಂಟ್‌ಗಳನ್ನು ಬಳಸುವಂತಿಲ್ಲ. ಹೂಡಿಕೆದಾರರ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಇದರಿಂದ ಹಣ ದುರ್ಬಳಕೆಯಾಗುವುದು ತಪ್ಪುತ್ತದೆ.
ಈ ಬದಲಾವಣೆಗೆ ಈ ಹಿಂದೆ ೨೦೨೨ರ ಏಪ್ರಿಲ್ ೧ರ ಗಡುವನ್ನು ವಿಧಿಸಲಾಗಿತ್ತು. ಆದರೆ ಬ್ರೋಕರ್‌ಗಳು ರೆಡಿ ಆಗಿರದಿದ್ದುದರಿಂದ ಜುಲೈ ೧ಕ್ಕೆ ಮುಂದೂಡಲಾಗಿತ್ತು.
ಸೆಬಿಯ ಹೊಸ ನಿಯಮದ ಅನ್ವಯ ಸ್ಟಾಕ್ ಬ್ರೋಕರ್‌ಗಳು ಎಸ್‌ಐಪಿಯನ್ನು ನೇರವಾಗಿ ಹೂಡಿಕೆದಾರರಿಂದಲೇ ಪಡೆಯಬೇಕಾಗುತ್ತದೆ.