ನವ ದೆಹಲಿ: ಭಾರತ ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ಗುರುವಾರ ನಿಷೇಧಿಸಿದೆ. ( Non-Basmati White Rice Export ) ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (Directorate General of Foreign Trade) ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಈ ಸಲ ಮುಂಗಾರು ಮಳೆಯ ವಿಳಂಬದಿಂದಾಗಿ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಅಕ್ಕಿಯ ಉತ್ಪಾದನೆ ಕುಂಠಿತವಾಗುವ ನಿರೀಕ್ಷೆ (shortfall in production) ಇದೆ. ಹೀಗಾಗಿ ದರವನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ರಫ್ತನ್ನು ನಿಷೇಧಿಸಲಾಗಿದೆ.
ಉತ್ತರ ಭಾರತದ ನಾನಾ ಕಡೆಗಳಲ್ಲಿ ಕಳೆದ ಕೆಲವು ವಾರಗಳಿಂದ ಭಾರಿ ಮಳೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಹಲವಾರು ಕಡೆಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಬಾಸ್ಮತಿಯೇತರ ಅಕ್ಕಿ ರಫ್ತಿನ ನೀತಿಯಲ್ಲಿ ಬದಲಾವಣೆ ತರಲಾಗಿದೆ. ಇದರ ರಫ್ತನ್ನು ನಿಷೇಧಿಸಲಾಗಿದೆ ಎಂದು DGFT ಅಧಿಸೂಚನೆ ತಿಳಿಸಿದೆ. ಹೀಗಿದ್ದರೂ, ಅಧಿಸೂಚನೆಗಿಂತ ಮೊದಲೇ ಒಪ್ಪಂದ ಆಗಿದ್ದರೆ, ಅಂಥ ಸಂದರ್ಭದಲ್ಲಿ ರಫ್ತಿಗೆ ಅವಕಾಶ ಇದೆ ಎಂದು ತಿಳಿಸಿದೆ. ಆಹಾರ ಭದ್ರತೆಯ ಅಗತ್ಯಕ್ಕೆ ಇತರ ದೇಶಗಳಿಗೆ ಅಕ್ಕಿ ರಫ್ತಿಗೆ ಕೂಡ ಅನುಮತಿ ಸಿಗಲಿದೆ.
ಜಾಗತಿಕ ಅಕ್ಕಿ ವ್ಯವಹಾರದಲ್ಲಿ 40% ಪಾಲನ್ನು ಭಾರತ ಹೊಂದಿದೆ. ಈ ವರ್ಷ ಅಕ್ಕಿಯ ದರದಲ್ಲಿ 8% ಏರಿಕೆಯಾಗಿದೆ. ಭಾರತವು ವಿಶ್ವದಲ್ಲೇ ಅಕ್ಕಿಯ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. 2024ರ ಆದಿಯಲ್ಲಿ ಸಾರ್ವತ್ರಿಕ ಚುನಾವಣೆಯೂ ನಡೆಯಲಿರುವುದರಿಂದ ಸರ್ಕಾರ ಮುಂಜಾಗರೂಕತೆ ವಹಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ನಿಗಾ ವಹಿಸಿದೆ ಎನ್ನುತ್ತಾರೆ ತಜ್ಞರು.