Site icon Vistara News

Bharat brand | ರಸಗೊಬ್ಬರ ಬ್ರಾಂಡ್‌ಗಳಿಗೆ ಭಾರತ್‌ ಹೆಸರಿಡಲು ಸೂಚನೆ

fertilizer

ನವ ದೆಹಲಿ: ದೇಶದಲ್ಲಿ ಮಾರಾಟವಾಗುವ ರಸಗೊಬ್ಬರ ಬ್ರಾಂಡ್‌ಗಳ ನಡುವೆ ಏಕರೂಪತೆಯನ್ನು ತರಲು “ಭಾರತ್‌ʼ ಹೆಸರಿನಲ್ಲಿಯೇ (Bharat brand) ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಸಗೊಬ್ಬರ ಕಂಪನಿಗಳಿಗೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಯೂರಿಯಾ, ಡಿಎಪಿ, ಎಂಒಪಿ ಅಥವಾ ಎನ್‌ಪಿಕೆ ರಸಗೊಬ್ಬರ ಚೀಲಗಳು ಭಾರತ್‌ ಯೂರಿಯಾ, ಭಾರತ್‌ ಡಿಎಪಿ, ಭಾರತ್‌ ಎಂಒಪಿ, ಭಾರತ್‌ ಎನ್‌ಪಿಕೆ ಹೆಸರಿನಡಿಯಲ್ಲಿ ಮಾರಾಟವಾಗಲಿದೆ.

ಸಾರ್ವಜನಿಕ, ಖಾಸಗಿ ಎನ್ನದೆ ಎಲ್ಲ ರಸಗೊಬ್ಬರ ಕಂಪನಿಗಳಿಗೂ ಇದು ಅನ್ವಯವಾಗಲಿದೆ. ಒಂದೇ ಬ್ರ್ಯಾಂಡ್‌ ಹೆಸರು ಮತ್ತು ಪ್ರಧಾನ ಮಂತ್ರಿ ಭಾರತೀಯ ಜಾನುವಾರಕ್‌ ಪರಿಯೋಜನಾ (ಪಿಎಂಬಿಜೆಪಿ) ಲೋಗೊ ಇರಬೇಕು. ರಸಗೊಬ್ಬರಕ್ಕೆ ಸರ್ಕಾರ ನೀಡುವ ಸಬ್ಸಿಡಿ ನೆರವನ್ನು ಕಂಪನಿಗಳು ರಸಗೊಬ್ಬರದ ಚೀಲಗಳಲ್ಲಿ ನಮೂದಿಸಬೇಕು. ಒಟ್ಟು ಪ್ಯಾಕೇಜ್‌ನಲ್ಲಿ ಕಂಪನಿಯ ಹೆಸರನ್ನು ಸಣ್ಣ ಅಕ್ಷರಗಳಲ್ಲಿ ಬರೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸಗೊಬ್ಬರ ಕಂಪನಿಗಳು ಸೆಪ್ಟೆಂಬರ್‌ ೧೫ರಿಂದ ಹಳೆಯ ವಿನ್ಯಾಸದ ಚೀಲಗಳನ್ನು ರಸಗೊಬ್ಬರ ಮಾರಾಟಕ್ಕೆ ಖರೀದಿ ಮಾಡಬಾರದು. ಅಕ್ಟೋಬರ್‌ ೨ರಿಂದ ಹೊಸ ಪರಿಕಲ್ಪನೆಯಲ್ಲಿ ಮಾರಾಟ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.

ರಷ್ಯಾ-ಉಕ್ರೇನ್‌ ಸಮರದ ಬಳಿಕ ರಸಗೊಬ್ಬರಕ್ಕೆ ಸರ್ಕಾರ ನೀಡುವ ಸಬ್ಸಿಡಿ ಮೊತ್ತದಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿ ೨ ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ಸಾಲಿನಲ್ಲಿ ೧.೬ ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗಿತ್ತು.

ಸರ್ಕಾರ ಹೇಳುವುದೇನು?: ಒಂದು ದೇಶ ಒಂದು ರಸಗೊಬ್ಬರ ಬ್ರಾಂಡ್‌ ನೀತಿಯನ್ನು ಜಾರಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತದ ಬ್ರಾಂಡ್‌ ಅನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಹಲವು ಕೇಂದ್ರ ಸರ್ಕಾರಿ ಯೋಜನೆಗಳು ಪ್ರಧಾನಮಂತ್ರಿ ಕಚೇರಿಯ ಹೆಸರನ್ನು ಒಳಗೊಂಡಿದೆ. ಪಿಎಂ-ಕಿಸಾನ್‌, ಪ್ರಧಾನ ಮಂತ್ರಿ ಫಸಲ್‌ ಬಿಮಾ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಇತ್ಯಾದಿ. ಆದರೆ ಖಾಸಗಿ ವಲಯದ ರಸಗೊಬ್ಬರ ಕಂಪನಿಗಳು, ಇದರಿಂದ ತಮ್ಮ ಬ್ರಾಂಡ್‌ ಮೌಲ್ಯಕ್ಕೆ ಧಕ್ಕೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version