ಕೊಚ್ಚಿ: ನೀವು ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಪೋನ್ ಮುಂತಾದವುಗಳನ್ನು ತರಿಸುವವರಾದರೆ ಈ ಘಟನೆ ಒಂದು ಪಾಠ. ಇ-ಶಾಪಿಂಗ್‌ನಲ್ಲಿ ಏನೇನು ಬಿಕ್ಕಟ್ಟುಗಳನ್ನು ಎದುರಿಸಬೇಕಾದೀತು (Online Shopping ordeal) ಎಂಬುದಕ್ಕೆ ಇದೊಂದು ಮಾದರಿ.
ಕೊಚ್ಚಿಯ ನಿವಾಸಿ ಎಂಕೆ ಸತೀಶ್ ಎಂಬವರು ಈ ಆನ್‌ಲೈನ್ ಶಾಪಿಂಗ್ ದುಃಸ್ವಪ್ನ ಅನುಭವಿಸಿದ್ದಾರೆ. ಇವರು ಫ್ಲಿಪ್‌ಕಾರ್ಟ್‌ನಲ್ಲಿ ಪ್ರೀಮಿಯಂ OnePlus 11 5G ಸ್ಮಾರ್ಟ್‌ಫೋನ್ ಖರೀದಿಸಿದ್ದರು. ಆದರೆ ಹೊಸ ಫೋನ್ ಬದಲು ಹಳೆಯ ಹಾಳಾದ ಫೋನ್ ದೊರೆತಿದೆ. ಅದರ ನಂತರ ಅವರ ಚಿತ್ರಹಿಂಸೆ ಆರಂಭವಾಯಿತು.
ಸೆಪ್ಟೆಂಬರ್ 1ರಂದು ಸತೀಶ್ OnePlus 11 5G ಸ್ಮಾರ್ಟ್‌ಫೋನ್ ಖರೀದಿಸಲು ನಿರ್ಧರಿಸಿದರು. ಫ್ಲಿಪ್‌ಕಾರ್ಟ್‌ನಲ್ಲಿ ವಿತರಣಾ ಶುಲ್ಕ ಸೇರಿದಂತೆ ಫೋನ್‌ನ ಬೆಲೆ 53,098 ರೂ. ಇತ್ತು. ಸತೀಶ್ ಅವರು ಫ್ಲಿಪ್‌ಕಾರ್ಟ್‌ನಲ್ಲಿ ʻಟರ್ಸ್ಟ್’ ಎಂಬ ಮಾರಾಟಗಾರರಿಂದ ಖರೀದಿ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಈ ಮಾರಾಟಗಾರರಿಗೆ ʻಫ್ಲಿಪ್‌ಕಾರ್ಟ್ ಅಶ್ಯೂರ್ಡ್ ಬ್ಯಾಡ್ಜ್’ ಕೂಡ ಇತ್ತು. ಇದು ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತನ್ನ ವಿಶ್ವಾಸಾರ್ಹ ವ್ಯಾಪಾರಿಗಳಿಗೆ ನೀಡುವ ನಂಬಿಕೆಯ ಸಂಕೇತವಾಗಿದೆ.
ಬಾಕ್ಸ್ ಪಡೆದ ಸತೀಶ್ ಅದನ್ನು ಡೆಲಿವರಿ ಸಿಬ್ಬಂದಿ ಮುಂದೆಯೇ ತೆರೆದು ಚೆಕ್ ಮಾಡಿದರು. ಆದರೆ ಫೋನ್ ಆನ್ ಆಗಲಿಲ್ಲ, ಕಾರ್ಯನಿರ್ವಹಿಸಲಿಲ್ಲ. ಆರಂಭದಲ್ಲಿ, ಇದು ಬ್ಯಾಟರಿಯ ಚಾರ್ಜ್ ಆಗದುದರಿಂದ ಆಗಿರಬಹುದು ಎಂದು ಶಂಕಿಸಿದರು. ಹಾಗಿರಲಿಲ್ಲ. ಸಾಮಾನ್ಯವಾಗಿ, ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಈ ದೋಷಯುಕ್ತ ಉತ್ಪನ್ನಗಳನ್ನು ಹಿಂದಿರುಗಿಸಲು ಅಥವಾ ಬದಲಾಯಿಸಲು ಪ್ರಯತ್ನಿಸುತ್ತಾರೆ. ಈ ಫೋನ್ ಸ್ವತಃ 12-ತಿಂಗಳ ವಾರಂಟಿಯೊಂದಿಗೆ ಬಂದಿತ್ತು. ಪೂರೈಕೆದಾರರು ಬದಲಿಸಲು ಅಥವಾ ರಿಪೇರಿಗಾಗಿ ಏಳು ದಿನಗಳ ಸರ್ವಿಸ್ ಸೆಂಟರ್ ವ್ಯವಸ್ಥೆ ನೀಡಿದ್ದರು.
ದುರದೃಷ್ಟವಶಾತ್ ಸತೀಶ್‌ಗೆ ಇದು ಕೈಕೊಟ್ಟಿತು. ಫ್ಲಿಪ್‌ಕಾರ್ಟ್ ತಿರುಗಿಬಿತ್ತು. ತಾವು OnePlus ಉತ್ಪನ್ನಗಳ ಅಧಿಕೃತ ವಿತರಕರಲ್ಲ. ಇದರಿಂದಾಗಿ ಫೋನ್‌ಗೆ ವಾರಂಟಿ ಬೆಂಬಲವನ್ನು ನೀಡಲು ಸಾಧ್ಯವಿಲ್ಲ ಎಂದಿತು. ಅಧಿಕೃತ ಚಾನೆಲ್ ಮೂಲಕ ಖರೀದಿಯನ್ನು ಮಾಡದ ಕಾರಣ ವಾರಂಟಿಯನ್ನು ಗೌರವಿಸಲು ಸಾಧ್ಯವಿಲ್ಲ ಎಂದು OnePlus ಕೂಡ ತಿಳಿಸಿತು. ಸತೀಶ್ ಕೊಚ್ಚಿಯ OnePlus ಸರ್ವಿಸ್ ಸೆಂಟರ್‌ಗೆ ಹೋದಾಗ ಅಲ್ಲಿ ಗುಜರಾತ್ ನಿವಾಸಿಯೊಬ್ಬರ ಹೆಸರಿನಲ್ಲಿ ಮಾಡಲಾದ ಸರ್ವಿಸ್‌ನ ಬಿಲ್ ನೀಡಲಾಯಿತು. ಇದು ಫೋನ್‌ನ ಹಳೆಯ ಹಿಸ್ಟರಿ ಮತ್ತು ಅದನ್ನು ಅಹಮದಾಬಾದ್‌ನಲ್ಲಿ ಏಕೆ ಸರ್ವಿಸ್ ಮಾಡಲಾಗಿದೆ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಇದೀಗ ಹಾಳಾದ ಸ್ಮಾರ್ಟ್‌ಫೋನ್ ಅನ್ನು ಏನು ಮಾಡಬಹುದು ಎಂಬ ಗೊಂದಲದಲ್ಲಿ ಸತೀಶ್ ಇದ್ದಾರೆ. ಅವರು ಕಳೆದುಕೊಂಡಿರುವುದು ಸಣ್ಣ ಮೊತ್ತವಲ್ಲ. ಆದರೆ ಇದನ್ನು ಸರಿಪಡಿಸಲು ಮಾರಾಟಗಾರರಾಗಲೀ, ಒನ್‌ಪ್ಲಸ್ ಕಂಪನಿಯಾಗಲೀ, ತರಿಸಿಕೊಟ್ಟ ಫ್ಲಿಪ್‌ಕಾರ್ಟ್ ಆಗಲೀ ಬಾಧ್ಯಸ್ಥಿಕೆ ತೆಗೆದುಕೊಳ್ಳುತ್ತಿಲ್ಲ. ಸತೀಶ್ ಈಗ ತಾವು ಅನುಭವಿಸಿದ ಯಾತನೆ, ಸಂಕಷ್ಟಕ್ಕೆ ನ್ಯಾಯ ಕೋರಿ ಗ್ರಾಹಕ ನ್ಯಾಯಾಲಯಕ್ಕೆ ಹೋಗಿದ್ದಾರೆ.
ಸತೀಶ್ ಅವರ ಕಥೆಯು ಆನ್‌ಲೈನ್ ಶಾಪಿಂಗ್‌ನಿಂದ ಎದುರಾಗಬಹುದಾದ ಸವಾಲುಗಳು ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು ಮನದಟ್ಟು ಮಾಡುವಂತಿದೆ. ದೊಡ್ಡ ಮೊತ್ತದ ಖರೀದಿ ಮಾಡುವಾಗ ಅತಿ ಎಚ್ಚರಿಕೆ ವಹಿಸಬೇಕಿದೆ. ಮಾರಾಟಗಾರರ ವಿಶ್ವಾಸಾರ್ಹತೆ, ಉತ್ಪನ್ನಗಳ ದೃಢೀಕರಣ, ಇ-ಶಾಪಿಂಗ್ ತಾಣದ ಜವಾಬ್ದಾರಿಕೆ ಇತ್ಯಾದಿಗಳನ್ನು ಅತ್ಯಂತ ಎಚ್ಚರದಿಂದ ಪರಿಶೀಲಿಸಬೇಕಿದೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಇನ್ನಷ್ಟು ಬಲವಾದ ಸುರಕ್ಷತೆಗಳ ಅಗತ್ಯವನ್ನೂ ಇದು ಒತ್ತಿಹೇಳುತ್ತದೆ.
ಇದನ್ನೂ ಓದಿ: Beauty Product Awareness: ಆನ್‌ಲೈನ್‌ನಲ್ಲಿ ಬ್ಯೂಟಿ ಪ್ರಾಡಕ್ಟ್ ಆರ್ಡರ್ ಮಾಡುವಾಗ ಇದು ತಿಳಿದಿರಲಿ