ಲಖನೌ: ಹೋಟೆಲ್ ತಂತ್ರಜ್ಞಾನ ವಲಯದ ದಿಗ್ಗಜ ಓಯೊ ಕಂಪನಿಯು (OYO Hotels) ಅಯೋಧ್ಯೆಯಲ್ಲಿ 2023ರಲ್ಲಿ 50 ಹೋಟೆಲ್‌ಗಳನ್ನು ತನ್ನ ನೆಟ್ ವರ್ಕ್‌ಗೆ ಸೇರಿಸುವುದಾಗಿ ತಿಳಿಸಿದೆ. ಈ ಪೈಕಿ 25 ಹೋಮ್‌ಸ್ಟೇಗಳಾಗಿದ್ದು, ಮನೆ ಮಾಲೀಕರಿಂದ ನಡೆಯಲಿವೆ. ಉಳಿದ 25 ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳಾಗಿದ್ದು, ತಲಾ 10ರಿಂದ 20 ಕೊಠಡಿಗಳನ್ನು ಹೊಂದಿವೆ.
ಉತ್ತರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಉತ್ತಮ ರೀತಿಯಲ್ಲಿ ಓಯೊವನ್ನು ಬೆಂಬಲಿಸುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಒಂದು ಕಡೆ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಮತ್ತೊಂದು ಕಡೆ ನಗರದ ಮೂಲಸೌಕರ್ಯಗಳು ಗಣನೀಯ ಅಭಿವೃದ್ಧಿಯಾಗಿದೆ. ಇದರ ಪರಿಣಾಮ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಹೆಚ್ಚಳವಾಗುವ ನಿರೀಕ್ಷೆ ಇದೆ.
2017ರಲ್ಲಿ ಅಯೋಧ್ಯೆಗೆ 1.5 ಕೋಟಿ ರೂ. ವೀಕ್ಷಕರು ಭೇಟಿ ನೀಡಿದ್ದರು. 2019ರಲ್ಲಿ 2 ಕೋಟಿಗೆ ಏರಿತ್ತು. 2024ರ ವೇಳೆಗೆ ಅಯೋಧ್ಯೆಯ ಪ್ರವಾಸೋದ್ಯಮ ಹತ್ತು ಪಟ್ಟು ವೃದ್ಧಿಸುವ ನಿರೀಕ್ಷೆ ಇದೆ. ಅಯೋಧ್ಯೆಯನ್ನು ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಮಾರ್ಪಡಿಸಲು 30,000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ. ವಾರಾಣಸಿ (ಕಾಶಿ) ದೇಶದ ಅತಿ ಜನಪ್ರಿಯ ಯಾತ್ರಾ ಸ್ಥಳವಾಗಿದೆ. ಪುರಿ, ಶಿರಡಿ, ಅಮೃತಸರ, ಹರಿದ್ವಾರ, ತಿರುಪತಿ, ಮಥುರಾ, ವೃಂದಾವನ್, ಗುರುವಾಯೂರ್, ಮಧುರೈ ನಂತರದ ಸಾಲಿನಲ್ಲಿವೆ.
ಐಪಿಒಗೆ ಸಜ್ಜಾಗುತ್ತಿರುವ ಓಯೊ, ಅಮೆರಿಕದಲ್ಲಿ ಈ ವರ್ಷ 100 ಹೋಟೆಲ್‌ಗಳನ್ನು ತನ್ನ ಜಾಲಕ್ಕೆ ಸೇರ್ಪಡೆಗೊಳಿಸಲಿದೆ. ಅಲ್ಲಿ ಬೇಡಿಕೆ ಹೆಚ್ಚಿದೆ ಎಂದು ಸ್ಥಾಪಕ ಮತ್ತು ಸಿಇಒ ರಿತೇಶ್ ಅಗ್ರವಾಲ್ ತಿಳಿಸಿದ್ದಾರೆ.