ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಗೆ (Delhi) ಭೇಟಿ ಕೊಟ್ಟವರು ಅಲ್ಲಿರುವ ಅಗ್ಗದ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹೆಸರುವಾಸಿಯಾಗಿರುವ ಪಾಲಿಕಾ ಬಜಾರ್ (Palika Bazar) ಸಿಲಿಕಾನ್ ಸಿಟಿ ಬೆಂಗಳೂರಲ್ಲೂ (Silicon City bengaluru) ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಯೋಚಿಸದೆ ಇರಲಾರರು. ಇನ್ನು ಈ ಬಗ್ಗೆ ಕನಸು ಕಾಣಬೇಕಿಲ್ಲ. ಯಾಕೆಂದರೆ ದೆಹಲಿಯಲ್ಲಿರುವಂತೆಯೇ ಬೆಂಗಳೂರು ತನ್ನದೇ ಆದ ಪಾಲಿಕಾ ಬಜಾರ್ ಅನ್ನು ಶೀಘ್ರದಲ್ಲೇ ಹೊಂದಲಿದೆ. ದೆಹಲಿಯಲ್ಲಿ ಇರುವಂತ ಪಾಲಿಕಾ ಬಜಾರ್ ಆಗಸ್ಟ್ ತಿಂಗಳಾಂತ್ಯದ ವೇಳೆ ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ.
ಎಲ್ಲಿ ಹೇಗೆ?
ದೆಹಲಿಯ ಪಾಲಿಕಾ ಬಜಾರ್ ಅಂಡರ್ ಗ್ರೌಂಡ್ ಶಾಪಿಂಗ್ ಕೇಂದ್ರವಾಗಿದೆ. ಪಶ್ಚಿಮ ಬೆಂಗಳೂರಿನ ವಿಜಯನಗರದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಸಂಪೂರ್ಣ ಹವಾನಿಯಂತ್ರಿತ ಮಾರುಕಟ್ಟೆಯು ವಿಜಯನಗರ ಮೆಟ್ರೋ ನಿಲ್ದಾಣದ ಸಮೀಪದಲ್ಲಿದೆ ಮತ್ತು ಸ್ಥಳೀಯರಿಗೆ ಸುಲಭವಾಗಿ ಇಲ್ಲಿಗೆ ತಲುಪುವ ವ್ಯವಸ್ಥೆ ಇದೆ.
ಒಂದು ಕಾಲದಲ್ಲಿ ಆ ಸ್ಥಳದಲ್ಲಿ 150ಕ್ಕೂ ಹೆಚ್ಚು ಮಾರಾಟಗಾರರು ತಾಜಾ ತರಕಾರಿ, ಹೂವುಗಳಿಂದ ಹಿಡಿದು ದೈನಂದಿನ ಅಗತ್ಯ ವಸ್ತುಗಳವರೆಗೆ ಇಲ್ಲಿ ಎಲ್ಲವನ್ನೂ ಮಾರಾಟ ಮಾಡುತ್ತಿದ್ದರು. ಹೊಸದಾಗಿ ನಿರ್ಮಿಸುವ ಸಲುವಾಗಿ ಈ ರಸ್ತೆಯನ್ನು ಅಧಿಕಾರಿಗಳು 2017ರಲ್ಲಿ ತೆರವುಗೊಳಿಸಿದ್ದರು. ಇದೀಗ ಆಧುನಿಕ ಅಂಡರ್ ಗ್ರೌಂಡ್ ಮಾರುಕಟ್ಟೆಯ ಸ್ಥಳ ಅಲ್ಲಿ ತಲೆ ಎತ್ತಲಿದೆ. ಈ ವಿಸ್ತಾರವಾದ ಮಾರುಕಟ್ಟೆಯು ನೂರು ಮೀಟರ್ ಉದ್ದ ಮತ್ತು ಹನ್ನೊಂದು ಮೀಟರ್ ಅಗಲವನ್ನು ಹೊಂದಿದೆ. 3 ಮೀಟರ್ ಅಗಲದ ಪಾದಚಾರಿ ಕಾಲುದಾರಿಯ ಎರಡೂ ಬದಿಯಲ್ಲಿ 75ಕ್ಕೂ ಹೆಚ್ಚು ಅಂಗಡಿಗಳನ್ನು ಅಚ್ಚುಕಟ್ಟಾಗಿ ಹೊಂದಿಸಲಾಗಿದೆ.
ಪಾಲಿಕಾ ಬಜಾರ್‌ನಲ್ಲಿರುವ ಸೌಲಭ್ಯಗಳು ಏನೇನು?
ಈ ಮಾರುಕಟ್ಟೆಯು ಆಧುನಿಕ ಮತ್ತು ಆರಾಮದಾಯಕವಾಗಿದ್ದು, ದೆಹಲಿಯ ಶಾಪಿಂಗ್ ಸೆಂಟರ್‌ಗಳ ಶೈಲಿಯಲ್ಲಿದೆ. ಹವಾನಿಯಂತ್ರಣ, ಸ್ವಯಂ ಚಾಲಿತ ಸ್ಲೈಡಿಂಗ್ ಬಾಗಿಲುಗಳು, ಎಸ್ಕಲೇಟರ್‌ಗಳು ಮತ್ತು ಎಲಿವೇಟರ್‌ಗಳನ್ನು ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಯೋಜನೆಯನ್ನು ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂದರ್ಶಕರ ಅನುಕೂಲಕ್ಕಾಗಿ ಎರಡು ಪ್ರವೇಶ ದ್ವಾರಗಳನ್ನು ಮತ್ತು ಪ್ರವಾಹವನ್ನು ತಪ್ಪಿಸಲು ನೀರಿನ ಪೈಪ್‌ಲೈನ್ ವ್ಯವಸ್ಥೆಯನ್ನು ಇರಿಸಲಾಗಿದೆ. ಮಳೆ ನೀರನ್ನು ನೇರವಾಗಿ ಚರಂಡಿಗಳಿಗೆ ಹರಿಸುವ ವ್ಯವಸ್ಥೆ ಇದೆ.
ವರ್ತಕರ ಆತಂಕ
ಸ್ಥಳೀಯ ಮಾರುಕಟ್ಟೆಯ ಮಾರಾಟಗಾರರು ಈಗಾಗಲೇ ಕಷ್ಟದಲ್ಲಿದ್ದಾರೆ. ಮುಂಬರುವ ಬಜಾರ್‌ಗಾಗಿ ಮಾರಾಟಗಾರರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಇದು ಸ್ಥಳೀಯ ವರ್ತಕರಲ್ಲಿ ಆತಂಕ ಹೆಚ್ಚಿಸಿದೆ ಎನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ.
ದೆಹಲಿ ಪಾಲಿಕೆ ಬಜಾರ್ ಹೇಗಿದೆ ಎಂಬ ವಿಡಿಯೊ ಈ ಸುದ್ದಿಯ ಜತೆಗಿದೆ. ಗಮನಿಸಿ…