Site icon Vistara News

Patanjali Ayurveda: 14 ಉತ್ಪನ್ನಗಳ ಮಾರಾಟ ನಿಲ್ಲಿಸಿದ ಪತಂಜಲಿ; ನೀವು ಖರೀದಿಸುತ್ತಿದ್ದ ವಸ್ತು ಇದೆಯೇ ಗಮನಿಸಿ

Patanjali Ayurveda

ಯೋಗ ಗುರು (yoga guru) ಬಾಬಾ ರಾಮದೇವ್ (baba ramdev) ಮತ್ತು ಬಾಲಕೃಷ್ಣ ಅವರು 2006ರಲ್ಲಿ ಸ್ಥಾಪಿಸಿದ್ದ ಪತಂಜಲಿ ಕಂಪನಿಯು (Patanjali Ayurveda) ತನ್ನ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆ. ಉತ್ತರಾಖಂಡ (Uttarakhand) ರಾಜ್ಯ ಪರವಾನಗಿ ಪ್ರಾಧಿಕಾರವು ಈ ವರ್ಷದ ಆರಂಭದಲ್ಲಿ ಅದರ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿತ್ತು.

ಭಾರತೀಯ ಬಹುರಾಷ್ಟ್ರೀಯ ಕಂಪನಿಯಾದ ಪತಂಜಲಿ ಆಯುರ್ವೇದ ಲಿಮಿಟೆಡ್ ಗೆ ಹಲವು ಕಾನೂನು ತೊಡಕುಗಳು ಎದುರಾಗಿದ್ದು, ವ್ಯಾಪಾರ ಬೆಳವಣಿಗೆಗಳಿಗೆ ಅಡ್ಡಿಯಾಗಿವೆ. ಈ ಕಾರಣಗಳಿಂದಾಗಿ ಕಂಪನಿಯು 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆ. ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೆಹ್, ಮುಕ್ತ ವತಿ ಎಕ್ಸ್‌ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್, ಲಿವಾಮೃತ್ ಅಡ್ವಾನ್ಸ್ ಮತ್ತು ಲಿವೋಗ್ರಿಟ್ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.

ಪತಂಜಲಿ ಜಾಹೀರಾತುಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎನ್ನುವ ಆರೋಪದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಮಧ್ಯೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.


ನ್ಯಾಯಾಲಯದ ನಿರ್ದೇಶನಗಳಿಗೆ ಪ್ರತಿಕ್ರಿಯೆಯಾಗಿ ಪತಂಜಲಿ ಆಯುರ್ವೇದವು ತನ್ನ 5,606 ಫ್ರ್ಯಾಂಚೈಸ್ ಸ್ಟೋರ್‌ ಗಳಿಂದ 14 ವಿವಾದಾತ್ಮಕ ಉತ್ಪನ್ನಗಳನ್ನು ಹಿಂತೆಗೆದುಕೊಂಡಿರುವುದಾಗಿ ಪೀಠಕ್ಕೆ ತಿಳಿಸಿದೆ. ಇದಲ್ಲದೆ ಈ ಉತ್ಪನ್ನಗಳಿಗೆ ಸಂಬಂಧಿಸಿದ ಎಲ್ಲಾ ಜಾಹೀರಾತುಗಳನ್ನು ವಿವಿಧ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತೆಗೆದುಹಾಕಲು ಕಾನೂನು ಅವಶ್ಯಕತೆಗಳನ್ನು ಅನುಸರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Patanjali Case: ಪತಂಜಲಿ ಕೇಸ್‌- ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌; IMA ಅಧ್ಯಕ್ಷನಿಗೆ ಛೀಮಾರಿ

ಭಾರತದ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಪ್ರಸ್ತುತ ಪತಂಜಲಿ ಆಯುರ್ವೇದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯ ಬಗ್ಗೆ ವಿಚಾರಣೆ ನಡೆಸುತ್ತಿದೆ. ಜುಲೈ 30ರಂದು ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ. ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ಷೇರುಗಳು ಮಂಗಳವಾರ ಮಧ್ಯಾಹ್ನ 3.30ಕ್ಕೆ 1,650 ರೂ.ನಷ್ಟು, ಅಂದರೆ ಶೇ. 1.12ರಷ್ಟು ಏರಿಕೆಯಾಗಿತ್ತು.

Exit mobile version