ನವದೆಹಲಿ: ಮುಂಬರುವ ಜೂನ್ ತಿಂಗಳಿನಿಂದ ವೈಯಕ್ತಿಕ ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಹೊಸ ಬದಲಾವಣೆಗಳು ಜಾರಿಯಾಗಲಿವೆ. ಈ ಉಪಯುಕ್ತ ಮಾಹಿತಿ ನಿಮಗಾಗಿ ಇಲ್ಲಿದೆ. ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲಗಾರರು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಗ್ರಾಹಕರಿಗೆ, ವಾಹನ ಮಾಲೀಕರಿಗೆ ಇವುಗಳು ನೇರವಾಗಿ ಅನ್ವಯವಾಗಲಿದೆ.
ಎಸ್‌ಬಿಐ ಗೃಹ ಸಾಲ ಬಡ್ಡಿ ದರ ಹೆಚ್ಚಳ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಇಬಿಎಲ್‌ಆರ್ ಆಧಾರಿತ ಗೃಹ ಸಾಲದ ಬಡ್ಡಿ ದರದಲ್ಲಿ ಶೇ.0.40 ಏರಿಕೆ ಮಾಡಿದ್ದು, ಶೇ.7.05ಕ್ಕೆ ವೃದ್ಧಿಸಿದೆ. ಈ ಹಿಂದೆ ಇಬಿಎಲ್‌ಆರ್ ಶೇ.6.65 ಇತ್ತು. 2022ರ ಜೂನ್ 1ರಿಂದ ಪರಿಷ್ಕೃತ ಬಡ್ಡಿ ದರ ಜಾರಿಯಾಗಲಿದೆ. ಬ್ಯಾಂಕ್‌ನ ರೆಪೊ ದರ ಆಧಾರಿತ ಸಾಲದ ಬಡ್ಡಿ ದರ ಶೇ.6.25 ಆಗಿದೆ.
ಥರ್ಡ್ ಪಾರ್ಟಿ ಮೋಟಾರು ವಾಹನ ವಿಮೆ ಪ್ರೀಮಿಯಂ ಹೆಚ್ಚಳ
ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಥರ್ಡ್ ಪಾರ್ಟಿ ವಾಹನ ವಿಮೆಯ ಪ್ರೀಮಿಯಂ ದರಗಳು ಜೂನ್ 1 ರಿಂದ ಏರಿಕೆಯಾಗುತ್ತಿವೆ.
1,000 ಸಿಸಿ ಒಳಗಿನ ಸಾಮರ್ಥ್ಯದ ಎಂಜಿನ್ ಇರುವ ಖಾಸಗಿ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ಮೊತ್ತವು 2,072 ರೂ.ಗಳಿಂದ 2,094 ರೂ.ಗೆ ಏರಿಕೆಯಾಗಲಿದೆ. 1000 ಸಿಸಿ ಮತ್ತು 1,500 ಸಿಸಿ ನಡುವಣ ಕಾರುಗಳಿಗೆ ಪ್ರೀಮಿಯಂ ಮೊತ್ತವು 3,221 ರೂ.ಗಳಿಂದ 3,416 ರೂ.ಗೆ ಏರಿಕೆಯಾಗಲಿದೆ. 1,500 ಸಿಸಿಗಿಂತ ಮೇಲ್ಪಟ್ಟ ವಾಹನಗಳಿಗೆ ಪ್ರೀಮಿಯಂ 7,890 ರೂ.ಗಳಿಂದ 7,892 ರೂ.ಗೆ ಏರಿಕೆಯಾಗಲಿದೆ.
ದ್ವಿಚಕ್ರ ವಾಹನಗಳಲ್ಲಿ 150 ಸಿಸಿಯಿಂದ ಮೇಲ್ಪಟ್ಟ ಹಾಗೂ 350 ಸಿಸಿ ಮೀರದ ವಾಹನಗಳಿಗೆ 1,366 ರೂ. ಪ್ರೀಮಿಯಂ ನಿಗದಿಯಾಗಿದೆ. 350 ಸಿಸಿ ಮೀರಿದ ದ್ವಿಚಕ್ರ ವಾಹನಗಳಿಗೆ ಪ್ರೀಮಿಯಂ 2.804 ರೂ.ಗಳಾಗಿದೆ. ಹೊಸ ಖಾಸಗಿ ಎಲೆಕ್ಟ್ರಿಕ್ ವಾಹನವನ್ನು ಮೂರು ವರ್ಷಗಳ ಅವಧಿಗೆ 5,543 ರೂ.ಗೆ ವಿಮೆ ಸೌಕರ್ಯ ಪಡೆಯಬಹುದು. ಆದರೆ ವಾಹನದ ಸಾಮರ್ಥ್ಯ 30 ಕಿಲೊವ್ಯಾಟ್ ಮೀರಕೂಡದು.
ಚಿನ್ನದ ಹಾಲ್ ಮಾರ್ಕ್ ಕಡ್ಡಾಯ
ಜೂನ್ 1 ರಿಂದ ಎರಡನೇ ಹಂತದ ಚಿನ್ನದ ಹಾಲ್ ಮಾರ್ಕ್ ಕಡ್ಡಾಯ ಪದ್ಧತಿ ಆರಂಭವಾಗಲಿದೆ. ಈಗಿನ 256 ಜಿಲ್ಲೆಗಳ ಜತೆಗೆ 32 ಹೊಸ ಜಿಲ್ಲೆಗಳಲ್ಲಿ ಚಿನ್ನದ ಹಾಲ್ ಮಾರ್ಕ್ ಕಡ್ಡಾಯವಾಗಲಿದೆ. ಆದ್ದರಿಂದ ಚಿನ್ನಾಭರಣ ಖರೀದಿಸುವವರು ಇದನ್ನು ಗಮನಿಸಬೇಕು.
ಐಪಿಪಿಬಿ ಸೇವಾ ಶುಲ್ಕ ಜಾರಿ
ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ) ಆಧಾರ್ ಆಧಾರಿತ ಪೇಮೆಂಟ್ ಸೇವೆ ( ಎಇಪಿಎಸ್) ಆರಂಭಿಸಿದ್ದು, ಇದಕ್ಕೆ ಜೂನ್ 15ರಿಂದ ಶುಲ್ಕ ಅನ್ವಯವಾಗಲಿದೆ. ಪ್ರತಿ ತಿಂಗಳು ಮೊದಲ ಮೂರು ಎಇಪಿಎಸ್ ವರ್ಗಾವಣೆಗಳು ಉಚಿತವಾಗಿರುತ್ತದೆ. ಬಳಿಕ ಪ್ರತಿ ಒಂದು ನಗದು ಡಿಪಾಸಿಟ್ ಇಡಲು ಅಥವಾ ಹಿಂತೆಗೆಯಲು 20 ರೂ. ಶುಲ್ಕ ಅನ್ವಯವಾಗಲಿದೆ.