Site icon Vistara News

RBI Interest rate | ಆರ್‌ಬಿಐನಿಂದ ಇಂದು ಬಡ್ಡಿ ದರ ಏರಿಕೆ ನಿರೀಕ್ಷೆ, ಷೇರು ಪೇಟೆ ಮೇಲೆ ಪ್ರಭಾವ?

bse

ಮುಂಬಯಿ: ಬಡ್ಡಿ ದರಗಳ ಬದಲಾವಣೆಗಳಿಗೂ ಷೇರು ಮಾರುಕಟ್ಟೆಗೂ ಸಂಬಂಧ ಇದೆ. ಇತಿಹಾಸವನ್ನು ಗಮನಿಸಿದರೆ ಬಹುತೇಕ ಸಂದರ್ಭಗಳಲ್ಲಿ ಆರ್‌ಬಿಐ ರೆಪೊ ದರವನ್ನು ( RBI Interest rate) ಏರಿಸಿದಾಗ ಷೇರು ಸೂಚ್ಯಂಕಗಳು ಏರಿಳಿತಕ್ಕೀಡಾಗಿವೆ.

ಸಾಲದ್ದಕ್ಕೆ ಜಾಗತಿಕ ಷೇರು ಮಾರುಕಟ್ಟೆಯ ತಲ್ಲಣಗಳೂ ಭಾರತೀಯ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಹಾಗಾದರೆ ನಿನ್ನೆ ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಏನಾಯಿತು ಎಂಬುದನ್ನು ನೋಡೋಣ.
ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಅಂಶಗಳಿಂದ ಷೇರುಪೇಟೆ ಗುರುವಾರ ಬೆಳಿಗ್ಗೆ ಭಾರಿ ಅಂತರದಿಂದ ಪ್ರಾರಂಭವಾದರೂ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟದ ಒತ್ತಡದಿಂದ ಸೆನಕ್ಸ್ ಮತ್ತು ನಿಫ್ಟಿ ಇಳಿಕೆಯಲ್ಲಿ ಅಂತ್ಯಕಂಡಿತು.
399 ಅಂಶಗಳ ಏರಿಕೆಯೊಂದಿಗೆ 56997 ರಲ್ಲಿ ಸೆನಕ್ಸ್ ಪ್ರಾರಂಭವಾದರೆ, 135 ಅಂಕಗಳ ಏರಿಕೆಯೊಂದಿಗೆ 16993 ಅಂಶಗಳೊಂದಿಗೆ ನಿಫ್ಟಿ ವಹಿವಾಟು ಆರಂಭಿಸಿತು. ಬ್ಯಾಂಕ್ ನಿಫ್ಟಿ 333 ಅಂಕಗಳ ಏರಿಕೆಯೊಂದಿಗೆ 38092 ಕ್ಕೆ ಪ್ರಾರಂಭವಾಯಿತು. ಆರಂಭವಾದಗಿನಿಂದಲೂ ಸತತ ಕುಸಿತ ಕಂಡಿದ್ದು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟದ ಒತ್ತಡದಿಂದ. ಮಧ್ಯಾಹ್ನ ದೇಶಿ ಹೂಡಿಕೆದಾರರ ಭಾಗವಹಿಸುವಿಕೆ ಮೂಲಕ ಸ್ವಲ್ಪ ಏರಿಕೆ ಕಂಡರೂ ದಿನದ ಅಂತ್ಯಕ್ಕೆ ಪುನಃ ಇಳಿಕೆ ದಾಖಲಿಸಿತು. ಸೆನಕ್ಸ್ 188 ಅಂಶಗಳ ಇಳಿಕೆಯೊಂದಿಗೆ 56409 ಅಂಕಗಳಿಗೆ ಮುಕ್ತಾಯವಾದರೆ, ನಿಫ್ಟಿ 40 ಅಂಕಗಳ ಇಳಿಕೆಯೊಂದಿಗೆ 16818 ಅಂಶಗಳಿಗೆ ವಹಿವಾಟು ಪೂರ್ಣಗೊಳಿಸಿತು. ಬ್ಯಾಂಕ್ ನಿಫ್ಟಿ 112 ಅಂಶಗಳ ಇಳಿಕೆಯೊಂದಿಗೆ 37647 ಅಂಕಗಳಿಗೆ ಮುಕ್ತಾಯಗೊಂಡಿತು.
ಇಂದು ಷೇರುಪೇಟೆಯ ಪ್ಯೂಚರ್ ಅಂಡ್ ಆಫ್ಷನ್ ಮಾರುಕಟ್ಟೆಯ ವಾರದ ಮತ್ತು ತಿಂಗಳ ವಾಯಿದೆ ದಿನವಾಗಿದ್ದರಿಂದ ಷೇರುಪೇಟೆ ಏರಿಳಿಕೆ ಕಂಡಿತು. ಆದರೆ ಸಣ್ಣ ಮತ್ತು ಮಧ್ಯಮ ಸೂಚಂಕಗಳು ಅಲ್ಪ ಪ್ರಮಾಣದ ಏರಿಕೆ ಕಂಡವು.
ಸಾರ್ವಜನಿಕ ಬ್ಯಾಂಕ್, ಔಷಧ, ಎಫ್ಎಂಸಿಜಿ ಮತ್ತು ಮಾಧ್ಯಮ ವಲಯದ ಷೇರುಗಳು ಏರಿಕೆ ಕಂಡರೆ, ಐಟಿ, ಇಂಧನ ಮತ್ತು ಸೇವಾವಲಯದ ಷೇರುಗಳು ಇಳಿಕೆ ಕಂಡವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟದ ಒತ್ತಡ
ಜಾಗತಿಕ ಹೂಡಿಕೆದಾರರು ಇಂದು 3600 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 3161 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ಭಾರಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಮೇರಿಕಾದ ಫೆಡರಲ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದ್ದು ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಬಡ್ಡಿದರ ಏರಿಕೆ ನಿರೀಕ್ಷೆ :
ಆರ್‌ಬಿಐ ತನ್ನ ರೆಪೊ ದರದಲ್ಲಿ ಶೇ. 0.50 ರಷ್ಟು ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇದೆ. ಬಡ್ಡಿದರ ಫಲಿತಾಂಶದ ನಂತರ ಮಾರುಕಟ್ಟೆಯ ಮುಂದಿನ ದಿನಗಳ ವಹಿವಾಟನ್ನು ಅಂದಾಜಿಸಬಹುದಾಗಿದೆ.

Exit mobile version