ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ 8-10ಕ್ಕೆ ನಡೆಸಲಿರುವ ದ್ವೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಪ್ರಮುಖ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಸತತ ಮೂರನೇ ಬಾರಿಗೆ ಮುಂದುವರಿಸುವ ನಿರೀಕ್ಷೆ ಇದೆ. (RBI interest rate) ಅಮೆರಿಕದ ಫೆಡರಲ್ ರಿಸರವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರವನ್ನು ಏರಿಸಿದ್ದರೂ, ಹಣದುಬ್ಬರ ಕಂಫರ್ಟ್ ಝೋನ್‌ನಲ್ಲಿ ಇರುವುದರಿಂದ ಆರ್‌ಬಿಐ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಕಳೆದ ವರ್ಷ ಮೇನಿಂದ ಬಡ್ಡಿ ದರಗಳು ಏರುಗತಿಯನ್ನು ಪಡೆದಿತ್ತು. ಫೆಬ್ರವರಿಯಿಂದ ರೆಪೊ ದರವನ್ನು 6.5% ರ ಮಟ್ಟದಲ್ಲಿ ಇರಿಸಲಾಗಿದೆ. ಏಪ್ರಿಲ್-ಜೂನ್‌ನಲ್ಲಿ ಯಥಾಸ್ಥಿತಿ ಇತ್ತು. ಆರ್‌ಬಿಐ ಗವರ್ನರ್ ನೇತೃತ್ವದ 6 ಸದಸ್ಯರ ನೇತೃತ್ವದ ಹಣಕಾಸು ನೀತಿ ಸಮಿತಿಯು (Monetary policy committee) ಆಗಸ್ಟ್ 8-10ಕ್ಕೆ ಹಣಕಾಸು ಪರಾಮರ್ಶೆ ನಡೆಸಲಿದೆ. ಆಗಸ್ಟ್ 10ಕ್ಕೆ ಗವರ್ನರ್ ಶಕ್ತಿಕಾಂತ ದಾಸ್ ಅವರು ನೀತಿಯನ್ನು ಘೋಷಿಸಲಿದ್ದಾರೆ.
ಆರ್ ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇಡಬಹುದು ಎಂದು ನಾವು ಭಾವಿಸುತ್ತಿದ್ದೇವೆ. ಹಣದುಬ್ಬರ ಪ್ರಮಾಣ ಶೇ.5ಕ್ಕಿಂತ ಕೆಳಮಟ್ಟದಲ್ಲಿ ಇರುವುದರಿಂದ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಉಳಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ. ಮೂರನೇ ತ್ರೈಮಾಸಿಕದ್ಲಲಿ 5.4% ಹಣದುಬ್ಬರವನ್ನು ಆರ್‌ಬಿಐ ನಿರೀಕ್ಷಿಸಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞರಾದ ಉಪಾಸನಾ ಭಾರಧ್ವಾಜ್, 2,000 ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಲಿಕ್ವಿಡಿಟಿ ಪರಿಸ್ಥಿತಿ ಪೂರಕವಾಗಿದೆ. ಆದ್ದರಿಂದ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಕಳೆದ ವಾರ ಬಡ್ಡಿ ದರದಲ್ಲಿ 0.25% ಏರಿಕೆ ಮಾಡಿತ್ತು. 5.25-5.5% ಕ್ಕೆ ಬಡ್ಡಿ ದರ ನಿಗದಿಯಾಗಿತ್ತು. ಇದು ಅಮೆರಿಕದ ಹಲವಾರು ವರ್ಷಗಳ ಇತಿಹಾಸಲ್ಲಿಯೇ ಗರಿಷ್ಠ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕೂಡ ಬಡ್ಡಿ ದರ ಏರಿಸಿದೆ. (3.75%) ಭಾರತದಲ್ಲಿ ರಿಟೇಲ್ ಹಣದುಬ್ಬರ ಜೂನ್‌ನಲ್ಲಿ 4.81% ರಷ್ಟಿತ್ತು. ಹೀಗಿದ್ದರೂ ಆರ್‌ಬಿಐನ ಕಂಫರ್ಟ್ ಝೋನ್‌ನಲ್ಲಿಯೇ ಇದೆ. ಈ ಹಿಂದೆ ಜೂನ್ 6-8ರಂದು ಎಂಪಿಸಿ ಸಭೆ ನಡೆಸಲಾಗಿತ್ತು.