Site icon Vistara News

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ; 17,448 ಕೋಟಿ ರೂ. ಲಾಭ

Reliance Industries Announces First Quarter Results 17448 crore rs profit declaration

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನಿಂದ (Reliance Industries) 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್‌ನಿಂದ ಜೂನ್ ತಿಂಗಳ ವರೆಗಿನ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕಾರ್ಯಾಚರಣೆಯಿಂದ 2.36 ಲಕ್ಷ ಕೋಟಿ ರೂಪಾಯಿ ಬಂದಿದ್ದು, ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಕಾರ್ಯಾಚರಣೆಯಿಂದ 2.10 ಲಕ್ಷ ಕೋಟಿ ಆದಾಯ ಬಂದಿತ್ತು. ಎಲ್ಲ ಸೆಗ್ಮೆಂಟ್‌ಗಳಿಂದಲೂ ಉತ್ತಮವಾದ ಕೊಡುಗೆ ಬಂದಿದ್ದರಿಂದ ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 11.5 ರಷ್ಟು ಆದಾಯದಲ್ಲಿ ಏರಿಕೆ ಆಗಿ, 2.58 ಲಕ್ಷ ಕೋಟಿ ರೂಪಾಯಿ ಬಂದಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು 17,448 ಕೋಟಿ ರೂಪಾಯಿ ಲಾಭವನ್ನು ಘೋಷಣೆ ಮಾಡಿದೆ.

ತೈಲ ಹಾಗೂ ಅನಿಲ ಸೆಗ್ಮೆಂಟ್ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ 33.4ರಷ್ಟು ಹೆಚ್ಚಾಗಿ 6,179 ಕೋಟಿ ರೂಪಾಯಿ ಬಂದಿದೆ. KG D6 ಹಾಗೂ CBM ಕ್ಷೇತ್ರದಲ್ಲಿ ಕಡಿಮೆ ಮೊತ್ತಕ್ಕೆ ಭಾಗಶಃ ಸರಿದೂಗಿದ್ದರಿಂದ ಮತ್ತು ಹೆಚ್ಚಿನ ವಾಲ್ಯೂಮ್‌ನಿಂದ ಇದು ಸಾಧ್ಯವಾಗಿದೆ. ಇದೇ ಸೆಗ್ಮೆಂಟ್ ತ್ರೈಮಾಸಿಕ ಇಬಿಐಟಿಡಿಎ 5,210 ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 29.8ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

ತೈಲದಿಂದ ರಾಸಾಯನಿಕ ತನಕದ ಸೆಗ್ಮೆಂಟ್ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 18.1ರಷ್ಟು ಹೆಚ್ಚಳವಾಗಿ, 1,57,133 ರೂಪಾಯಿ ಬಂದಿದೆ. ಇನ್ನು ಇದೇ ಸೆಗ್ಮೆಂಟ್ ಇಬಿಐಟಿಡಿಎ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 14.3ರಷ್ಟು ಇಳಿಕೆಯಾಗಿ, 13,093 ಕೋಟಿ ಬಂದಿದೆ.

ರಿಲಯನ್ಸ್ ರೀಟೇಲ್

ರಿಲಯನ್ಸ್ ರೀಟೇಲ್ ಸಗಟು ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.1ರಷ್ಟು ಏರಿಕೆಯಾಗಿ, 75,615 ಕೋಟಿ ರೂಪಾಯಿ ಆಗಿದೆ. ಈ ತ್ರೈಮಾಸಿಕದ ಇಬಿಐಟಿಡಿಎ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 10.5ರಷ್ಟು ಹೆಚ್ಚಳವಾಗಿ, 5,664 ಕೋಟಿ ರೂಪಾಯಿ ಮುಟ್ಟಿದೆ. ರಿಲಯನ್ಸ್ ರೀಟೇಲ್ ತನ್ನ ಮಳಿಗೆಗಳ ಸಂಖ್ಯೆಯನ್ನು 331ರಷ್ಟು ಹೆಚ್ಚಿಸಿ, 18,918 ತಲುಪಿದೆ. ಈಗ ಒಟ್ಟಾರೆ 8.13 ಕೋಟಿ ಚದರಡಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತದೆ. ನೋಂದಾಯಿತ ಗ್ರಾಹಕರ ಸಂಖ್ಯೆಯು 31.6 ಕೋಟಿ ಆಗಿದ್ದು, ಒಟ್ಟಾರೆ ವಹಿವಾಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ 6.4ರಷ್ಟು ಹೆಚ್ಚಳವಾಗಿ, 33.4 ಕೋಟಿ ದಾಖಲಾಗಿದೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್‌ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಅಂದ ಹಾಗೆ ವರ್ಷದ ಹಿಂದಿನ ಇದೇ ಹಣಕಾಸು ತ್ರೈಮಾಸಿಕದಲ್ಲಿ ಜಿಯೋ 4,863 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ಕಾರ್ಯಾಚರಣೆ ಮೂಲಕ ಬರುವಂಥ ಆದಾಯವು 26,478 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕವಾಗಿ 25,959 ಕೋಟಿ ರೂಪಾಯಿ ಆದಾಯ ಬಂದಿತ್ತು. ವರ್ಷದ ಹಿಂದಿನ ಇದೇ ಅವಧಿಯಲ್ಲಿ 24,042 ಕೋಟಿ ರೂಪಾಯಿ ಕಾರ್ಯಾಚರಣೆ ಮೂಲಕ ಆದಾಯ ಪಡೆದದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ನಾಳೆ ಕರೆಂಟ್‌ ಇರಲ್ಲ!

ಇನ್ನು ತಿಂಗಳಿಗೆ ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯದಲ್ಲಿ, ಅಂದರೆ ಇದನ್ನು ಎಆರ್‌ಪಿಯು (ಆವರೇಜ್ ರೆವಿನ್ಯೂ ಪರ್ ಯೂಸರ್) ಎನ್ನಲಾಗುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಹಾಗೂ ಇಬಿಐಟಿಡಿಎ ಬೆಳವಣಿಗೆಗೆ ಇದು ಕೊಡುಗೆ ನೀಡಿದೆ. ಚೀನಾದ ಹೊರಗೆ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ 5ಜಿ ಟೆಲಿಕಾಂ ಆಪರೇಟರ್ ಎಂಬ ಹೆಮ್ಮೆ ಈಗ ಜಿಯೋದ ಪಾಲಾಗಿದೆ. ಹದಿಮೂರು ಕೋಟಿ ಚಂದಾದಾರರಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 2025ನೇ ಇಸವಿಯಲ್ಲಿ ಅತಿದೊಡ್ಡ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರ್) ಮುಂದಾಗಬಹುದು. 9.3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವ್ಯ ಮೌಲ್ಯಮಾಪನದೊಂದಿಗೆ ಇದು ಆಗಬಹುದು ಎಂದು ಜೆಫರೀಸ್ ಟಿಪ್ಪಣಿ ಹೇಳಿದೆ.

ಜಿಯೋ ‘$112 ಶತಕೋಟಿ ಮೌಲ್ಯದಲ್ಲಿ ಲಿಸ್ಟಿಂಗ್ ಮಾಡಬಹುದು’ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆಗೆ ‘ಶೇ 7ರಿಂದ 15ರಷ್ಟು ಮೇಲಕ್ಕೆ’ ಸೇರಿಸಬಹುದು ಎಂದು ಜೆಫ್ರೀಸ್ ಜುಲೈ 11 ರಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಕಂಪನಿಯ ತ್ರೈಮಾಸಿಕ ಫಲಿತಾಂಶದ ಬಗ್ಗೆ ಮಾತನಾಡಿ, ದುರ್ಬಲ ಒ2ಸಿ ಆಪರೇಟಿಂಗ್ ಪರಿಸರವನ್ನು ಸರಿದೂಗಿಸುವಲ್ಲಿ ಗ್ರಾಹಕ ಮತ್ತು ಅಪ್‌ಸ್ಟ್ರೀಮ್ ವ್ಯವಹಾರಗಳ ಬಲವಾದ ಕೊಡುಗೆಯೊಂದಿಗೆ ತ್ರೈಮಾಸಿಕದಲ್ಲಿ ಏಕೀಕೃತ ಇಬಿಐಟಿಡಿಎ ಸುಧಾರಿಸಿದೆ. ಈ ತ್ರೈಮಾಸಿಕದಲ್ಲಿ ರಿಲಯನ್ಸ್‌ನ ಗಟ್ಟಿತನವನ್ನು ಅದರ ಕಾರ್ಯಾಚರಣೆ ಮತ್ತು ಹಣಕಾಸಿನ ಕಾರ್ಯಕ್ಷಮತೆಯು ಅದರ ವೈವಿಧ್ಯಮಯ ವ್ಯವಹಾರಗಳ ಪೋರ್ಟ್‌ಫೋಲಿಯೊದ ಬಲವನ್ನು ಒತ್ತಿಹೇಳುತ್ತದೆ.

ಮುಖ್ಯವಾಗಿ, ಈ ವ್ಯವಹಾರಗಳು ಭಾರತದ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತಿವೆ, ಸರಕು ಮತ್ತು ಸೇವೆಗಳ ಡಿಜಿಟಲ್ ಮತ್ತು ಭೌತಿಕ ವಿತರಣೆಗೆ ಪ್ರಮುಖ ಶಕ್ತಿ ಮತ್ತು ಅದ್ಭುತವಾದ ಚಾನಲ್‌ಗಳನ್ನು ಒದಗಿಸುತ್ತವೆ ಎಂದಿದ್ದಾರೆ.

ರಿಲಯನ್ಸ್ ಜಿಯೋದ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ, ಅತ್ಯುತ್ತಮ ಗುಣಮಟ್ಟದ, ಕೈಗೆಟುಕುವ ಇಂಟರ್ನೆಟ್ ಎಂಬುದು ಡಿಜಿಟಲ್ ಇಂಡಿಯಾದ ಬೆನ್ನೆಲುಬು. ಇದಕ್ಕೆ ಕೊಡುಗೆ ನೀಡುವ ಹೆಮ್ಮೆಯು ಜಿಯೋಗೆ ಇದೆ. ನಮ್ಮ ಹೊಸ ಪ್ರೀಪೇಯ್ಡ್ ಪ್ಲಾನ್‌ಗಳು 5ಜಿ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗಿನ ಕ್ಷೇತ್ರದ ಆವಿಷ್ಕಾರವನ್ನು ಗಟ್ಟಿಗೊಳಿಸುತ್ತದೆ ಮತ್ತು ಸುಸ್ಥಿರ ಬೆಳವಣಿಗೆ ಕಡೆಗೆ ಸಾಗಲು ನೆರವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Kannada New Movie: ಜು.26ರಂದು ’ಕುಬುಸʼ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮಾರುಕಟ್ಟೆ ವ್ಯವಹಾರ ಶುಕ್ರವಾರದಂದು ಕೊನೆಗೊಂಡ ವೇಳೆಗೆ ಪ್ರತಿ ಷೇರಿಗೆ 3,116.95 ರೂಪಾಯಿಯಂತೆ ಮುಕ್ತಾಯ ಕಂಡಿವೆ. ಷೇರಿನ ಮೌಲ್ಯ ಶೇ 1.78ರಷ್ಟು ಇಳಿಕೆ ಕಂಡಿದೆ.

Exit mobile version