ನವ ದೆಹಲಿ: ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ಸೇವೆ ರಫ್ತುದಾರ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TaTa Consultancy Services -TCS) ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 11,392 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 14.76% ಏರಿಕೆ ದಾಖಲಿಸಿದೆ. ಹಾಗೆಯೇ ಟಿಸಿಎಸ್ ಪ್ರತಿ ಷೇರಿಗೆ 24 ರೂ.ಗಳ ಡಿವಿಡೆಂಡ್ ಅನ್ನೂ ಘೋಷಿಸಿದೆ.
2022-23ರ ಸಾಲಿನಲ್ಲಿ ಟಿಸಿಎಸ್ ಪ್ರಬಲ ಬೆಳವಣಿಗೆಯನ್ನು ದಾಖಲಿಸಿದೆ. ಆರ್ಡರ್ ಬುಕ್ ಗಣನೀಯ ಬೆಳವಣಿಗೆ ದಾಖಲಿಸಿದೆ. ಇದು ಕಂಪನಿಯ ಸೇವೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸವನ್ನು ಬಿಂಬಿಸಿದೆ ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು ತಿಳಿಸಿದ್ದಾರೆ.
ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರು 2023ರ ಜೂನ್ 1ರಂದು ಕೆ. ಕೃತಿವಾಸನ್ ಅವರಿಗೆ ಅಧಿಕಾರ ವಹಿಸಿಕೊಡಲಿದ್ದಾರೆ. ರಿಟೇಲ್, ಸಿಪಿಜಿ, ಜೀವ ವಿಜ್ಞಾನ ಮತ್ತು ಹೆಲ್ತ್ ಕೇರ್ ವಲಯದಲ್ಲಿ ಟಿಸಿಎಸ್ ಉತ್ತಮ ಬೆಳವಣಿಗೆ ದಾಖಲಿಸಿದೆ.
ಜನವರಿ-ಮಾರ್ಚ್ ಅವಧಿಯಲ್ಲಿ ಟಿಸಿಎಸ್‌ನಲ್ಲಿ 821 ಉದ್ಯೋಗಿಗಳು ಹೊಸತಾಗಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಉದ್ಯೋಗಿಗಳ ಸಂಖ್ಯೆ 614,795ಕ್ಕೆ ಏರಿಕೆಯಾಗಿದೆ. 2022-23ರಲ್ಲಿ 22,600 ಮಂದಿ ಹೊಸಬರು ಸೇರ್ಪಡೆಯಾಗಿದ್ದಾರೆ. ಟಿಸಿಎಸ್ ಷೇರು ದರ ಬುಧವಾರ 3,242 ರೂ.ನಷ್ಟಿತ್ತು.