Site icon Vistara News

Safe investment : ಸುರಕ್ಷಿತ ಹೂಡಿಕೆಯ ಆಯ್ಕೆ ಹೇಗೆ? ಲಿಕ್ವಿಡಿಟಿ ಎಂದರೇನು?

cash

ಚಿನ್ನ, ರಿಯಲ್‌ ಎಸ್ಟೇಟ್‌, ಫಿಕ್ಸೆಡ್‌ ಡಿಪಾಸಿಟ್‌, ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ, ಹೂಡಿಕೆಯ ಸುರಕ್ಷತೆ ಮತ್ತು ( Safe investment ) ಲಿಕ್ವಿಡಿಟಿ ನಿರ್ಣಾಯಕ ಅಂಶವಾಗಿರುತ್ತದೆ. ಸಹಜವಾಗಿ ಸರ್ಕಾರಿ ಮೂಲದ ಇನ್ವೆಸ್ಟ್‌ಮೆಂಟ್‌ ಅಸೆಟ್‌ಗಳು ಹೆಚ್ಚು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌, ಅಟಲ್‌ ಪೆನ್ಷನ್‌ ಸ್ಕೀಮ್‌, ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌, ಸುಕನ್ಯಾ ಸಮೃದ್ಧಿ ಇತ್ಯಾದಿಗಳು ಸರ್ಕಾರಿ ಮೂಲದ ಯೋಜನೆಗಳಾಗಿದ್ದು ಸುರಕ್ಷಿತವಾಗಿವೆ.

ಕಾರ್ಪೊರೇಟ್‌ ವಲಯದಲ್ಲಿ ಸಾರ್ವಜನಿಕ ವಲಯದ ಕಂಪನಿಗಳ ಫಿಕ್ಸೆಡ್‌ ಡಿಪಾಸಿಟ್‌ ಸ್ಕೀಮ್‌ಗಳು ಸೇಫ್‌ ಎನ್ನಿಸಿವೆ. ಡಿಬೆಂಚರ್‌ಗಳು ನಂತರದ ಸ್ಥಾನದಲ್ಲಿ ಸುರಕ್ಷಿತ ಎನ್ನಿಸಿವೆ. ಬಳಿಕ ಹೇಳುವುದಿದ್ದರೆ ಖಾಸಗಿ ಕಂಪನಿಗಳ ಫಿಕ್ಸೆಡ್‌ ಡಿಪಾಸಿಟ್‌ಗಳನ್ನು ಪರಿಗಣಿಸಬಹುದು. ಸುರಕ್ಷತೆಯ ನಿಟ್ಟಿನಲ್ಲಿ ಷೇರು ಕೊನೆಯ ಸ್ಥಾನದಲ್ಲಿದೆ.

ಷೇರುಗಳಲ್ಲಿ ಕೂಡ ಎಲ್ಲ ಕಂಪನಿಯ ಷೇರುಗಳೂ ಭಾರಿ ರಿಸ್ಕ್‌ ಹೊಂದಿರುವುದಿಲ್ಲ. ಬ್ಲೂ ಚಿಪ್‌ ಕಂಪನಿಗಳ ಷೇರುಗಳು ಉತ್ತಮ ಬೆಳವಣಿಗೆ ಮತ್ತು ಸುರಕ್ಷತೆಗೆ ಖ್ಯಾತಿ ಗಳಿಸಿವೆ. ಅಲ್ಪಕಾಲಿಕ ಇಳಿಕೆ ದಾಖಲಿಸಿದರೂ, ಇಂಥ ಷೇರುಗಳ ದರ ಬಳಿಕ ಏರಿಕೆಯಾಗುವುದನ್ನು ಗಮನಿಸಬಹುದು. ಬ್ಲೂ ಚಿಪ್‌ ಕಂಪನಿ ಎಂದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ, ಆರ್ಥಿಕವಾಗಿ ಬಲಾಢ್ಯವಾಗಿರುವ, ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿ.

ಇದನ್ನೂ ಓದಿ: Term Insurance : 1 ಸಾವಿರಕ್ಕೆ 1 ಕೋಟಿ ಇನ್ಷೂರೆನ್ಸ್!‌ ಫುಲ್‌ ಡಿಟೇಲ್ಸ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌

ಹೂಡಿಕೆ ಅಥವಾ ಇನ್ವೆಸ್ಟ್‌ಮೆಂಟ್‌ ವಿಚಾರಕ್ಕೆ ಬಂದಾಗ ಲಿಕ್ವಿಡಿಟಿ ಎನ್ನುವ ಪದವನ್ನು ನೀವು ಕೇಳಿರಬಹುದು. ಏನಿದು ಲಿಕ್ವಿಡಿಟಿ? ಉತ್ತಮ ಹೂಡಿಕೆಯ ಮಾನದಂಡದಲ್ಲಿ ಇದು ಮುಖ್ಯ. ನೀವು ಎಷ್ಟು ಬೇಗ ನಿಮ್ಮ ಹೂಡಿಕೆಯನ್ನು ನಗದೀಕರಿಸಿಕೊಳ್ಳಬಹುದು ಎಂಬುದನ್ನು ಲಿಕ್ವಿಡಿಟಿ ಪರಿಗಣಿಸುತ್ತದೆ. ಲಿಕ್ವಿಡಿಟಿ ಹೆಚ್ಚು ಇದೆ ಎಂದರೆ, ನಿಮ್ಮ ಅಸೆಟ್‌ ಅನ್ನು ಬೇಗ ಕ್ಯಾಶ್‌ ಆಗಿ ಪರಿವರ್ತಿಸಬಹುದು ಎಂದರ್ಥ. ಲಿಕ್ವಿಡಿಟಿ ಕಡಿಮೆ ಎಂದರೆ ಅಂಥ ಅಸೆಟ್‌ ಅನ್ನು ಬೇಗ ಕ್ಯಾಶ್‌ ಆಗಿ ಪರಿವರ್ತಿಸಲು ಆಗೋದಿಲ್ಲ ಎಂದರ್ಥ. ಉದಾಹರಣೆಗೆ ನಿಮ್ಮ ಬಳಿ ಚಿನ್ನ ಮತ್ತು ಸೈಟ್‌ ಇದೆ ಎಂದಿಟ್ಟುಕೊಳ್ಳಿ. ಸೈಟಿಗೆ ಹೋಲಿಸಿದರೆ ಚಿನ್ನವನ್ನು ಬೇಗ ಮಾರಾಟ ಮಾಡಿ ನಗದು ಪಡೆಯಬಹುದು. ಇಲ್ಲಿ ಚಿನ್ನದ ಲಿಕ್ವಿಡಿಟಿ ಹೆಚ್ಚು. ನಿಮ್ಮ ಕೈಯಲ್ಲಿರುವ ನಗದು ಹೆಚ್ಚು ಲಿಕ್ವಿಡಿಟಿ ಹೊಂದಿರುವ ಸಾಧನ. ಬ್ಯಾಂಕ್‌ ಖಾತೆಯಲ್ಲಿರುವ ಹಣ, ಫಿಕ್ಸೆಡ್‌ ಡಿಪಾಸಿಟ್‌ ಕೂಡ ಲಿಕ್ವಿಡಿಟಿಯನ್ನು ಹೆಚ್ಚು ಹೊಂದಿರುತ್ತವೆ. ಷೇರು ಕೂಡ ಹಾಗೆಯೇ. ಚಿನ್ನ, ಬೆಳ್ಳಿ ನಂತರದ ಸ್ಥಾನದಲ್ಲಿ ಬರುತ್ತವೆ. ಆದರೆ ರಿಯಲ್‌ ಎಸ್ಟೇಟ್‌ ಪ್ರಾಪರ್ಟಿಗಳು ಲಿಕ್ವಿಡಿಟಿಯ ವಿಷಯದಲ್ಲಿ ಕೊನೆಯಲ್ಲಿರುತ್ತವೆ. ಏಕೆಂದರೆ ಇದನ್ನು ಫಟಾಫಟ್‌ ಮಾರಾಟ ಮಾಡಿ ನಗದೀಕರಿಸಲು ಆಗುವುದಿಲ್ಲ.

ಹೂಡಿಕೆಗೆ ರಿಟರ್ನ್ ಯಾವಾಗ ಸಿಗುತ್ತದೆ? ಸಾಮಾನ್ಯವಾಗಿ ಹೂಡಿಕೆಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಲೆಕ್ಕದಲ್ಲಿ ರಿಟರ್ನ್‌ ಸಿಗುತ್ತದೆ. ಈಕ್ವಿಟಿ ಷೇರು, ಡಿಬೆಂಚರ್‌ಗಳಲ್ಲಿ ಬಂಡವಾಳ ವೃದ್ಧಿಯ ರೂಪದಲ್ಲೂ ಸಿಗುತ್ತದೆ. ಲಾಂಗ್ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ಗೆ ತೆರಿಗೆ ವಿನಾಯಿತಿಗಳೂ ಸಿಗುತ್ತದೆ. ‌

ಹೂಡಿಕೆಗೆ ಆಯ್ಕೆಗಳು ಹಲವು:

ಹಾಗಾದರೆ ಎಲ್ಲಿ ಹೂಡಿಕೆ ಮಾಡಬೇಕು? ಉತ್ತಮ ಹೂಡಿಕೆಯ ಖಾತೆ ಹೇಗಿರುತ್ತದೆ? ಲಿಕ್ವಿಡ್‌ ಅಸೆಟ್ ಗಳು, ಈಕ್ವಿಟಿ, ರಿಯಲ್‌ ಎಸ್ಟೇಟ್‌, ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನೀವು ತಕ್ಷಣ ಸಿಗುವಂಥ ಲಿಕ್ವಿಡ್‌ ಅಸೆಟ್‌ಗಳಲ್ಲಿ ಒಂದಷ್ಟು ಹಣವನ್ನು ಇಟ್ಟಿರಬೇಕು. ಅದು ಜತೆಗೆ ಬಡ್ಡಿ ಆದಾಯವನ್ನೂ ಕೊಡುತ್ತಿರಬೇಕು. ಉದಾಹರಣೆಗೆ ಬ್ಯಾಂಕ್‌ ಡಿಪಾಸಿಟ್.‌ ದೀರ್ಘಕಾಲೀನಕ್ಕೆ ಸಾರ್ವಜನಿಕ ಭವಿಷ್ಯನಿಧಿಕೂಡ ಸೇಫ್‌ ಇನ್ವೆಸ್ಟ್‌ ಮೆಂಟ್‌ ಆಗುತ್ತದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ಹಣ ಬೇಕಾಗುತ್ತದೆ. ಫಿಕ್ಸೆಡ್‌ ಡಿಪಾಸಿಟ್‌ ಇದ್ದರೆ ಅದರ ಮೇಲೆ ಸುಲಭವಾಗಿ ಹಾಗೂ ಶೀಘ್ರವಾಗಿ ಸಾಲ ಪಡೆಯಬಹುದು.

ದೀರ್ಘಾವಧಿ ಹೂಡಿಕೆಯ ನಿಟ್ಟಿನಲ್ಲಿ ಈಕ್ವಿಟಿ ಪೋರ್ಟ್ ಫೋಲಿಯೊ, ರಿಯಲ್‌ ಎಸ್ಟೇಟ್‌ ಹೂಡಿಕೆ ಉತ್ತಮ ಆಯ್ಕೆಯಾಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡುವ ಮುನ್ನ ಉತ್ತಮ ಬ್ರೋಕರ್‌ ಅನ್ನು ಕಂಡುಕೊಳ್ಳಿ. ನಿಮ್ಮ ಬ್ರೋಕಿಂಗ್‌ ಕಂಪನಿಯು ನಿಮ್ಮ ಪರ ಷೇರುಗಳ ಕೊಡು-ಕೊಳ್ಳುವಿಕೆಯನ್ನು ಮಾಡುವುದಲ್ಲದೆ, ಹೂಡಿಕೆಯ ಬಗ್ಗೆ ಉತ್ತಮ ಮಾರ್ಗದರ್ಶಕವೂ ಆಗಿರಬೇಕು. ಷೇರುಗಳನ್ನು ಖರೀದಿಸುವುದರಿಂದ ನಿಮ್ಮ ಸಂಪತ್ತು ಬೆಳೆಯುವುದರ ಜತೆಗೆ ಡಿವಿಡೆಂಡ್‌ ಕೂಡ ಸಿಗುತ್ತದೆ. ಉತ್ತಮ ಉದ್ಯಮಿಯ ಕಂಪನಿಯಲ್ಲಿ ಹೂಡಿಕೆ ಮಾಡುವುದರೊಂದ ರಾಷ್ಟ್ರ ನಿರ್ಮಾಣದಲ್ಲೂ ಕೈ ಜೋಡಿಸಿದಂತೆಯೂ ಆಗುತ್ತದೆ.

Exit mobile version