ಮುಂಬಯಿ: ಷೇರುಪೇಟೆಗೆ ದೊಡ್ಡಣ್ಣ ರಿಲಯನ್ಸ್ ಇಂದು ಬೆಂಬಲವಾಗಿ ನಿಂತ ಪರಿಣಾಮ ಮಾರುಕಟ್ಟೆಯ ಇಳಿಕೆಯ ಹಾದಿಗೆ ಕಡಿವಾಣ ಹಾಕಿದಂತಾಗಿದೆ. ಜಾಗತಿಕ ಅಸ್ಥಿರತೆ ಮತ್ತು ಲಾಭ ನಗಧೀಕರಣ ಇಂದು ಸಹ ಮುಂದುವರಿದಿದ್ದರಿಂದ ಮಾರುಕಟ್ಟೆಯ ಬಹುತೇಕ ಷೇರುಗಳು ಇಳಿಕೆ ಕಂಡವು. (Sensex ) ಷೇರುಪೇಟೆಯಲ್ಲಿ ಶೇ. 13ರಷ್ಟು ಮೌಲ್ಯ ಹೊಂದಿರುವ ದೇಶದ ಕಂಪನಿಗಳಲ್ಲೇ ದಿಗ್ಗಜವಾಗಿರುವ ರಿಲಯಲ್ಸ್ ಒಂದೇ ಇಂದು ನಿಫ್ಟಿಗೆ 58 ಅಂಕಗಳ ಬೆಂಬಲ ನೀಡಿದೆ.
ಬೆಳಿಗ್ಗೆ ನಿಫ್ಟಿ 19 ಅಂಕಗಳ ಅಲ್ಪ ಏರಿಕೆಯೊಂದಿಗೆ 17756 ರಲ್ಲಿ ಆರಂಭವಾದರೆ ಸೆನ್ಸೆಕ್ಸ್ 10 ಅಂಕಗಳ ಅಲ್ಪ ಇಳಿಕೆಯೊಂದಿಗೆ 59746 ರಲ್ಲಿ ಪ್ರಾರಂಭವಾಯಿತು. ಬ್ಯಾಂಕ್ ನಿಫ್ಟಿ ಸಹ 62 ಅಂಶಗಳ ಇಳಿಕೆಯೊಂದಿಗೆ 41236 ರಲ್ಲಿ ವಹಿವಾಟು ಶುರುವಾಯಿತು.
ನಿಫ್ಟಿ ಆರಂಭಿಕ ಅಲ್ಪ ಹೆಚ್ಚಳವನ್ನು ಕಾಯ್ದುಕೊಂಡು ಪ್ರಮುಖ ರೆಜಿಸ್ಟೇನ್ಸ್ ಲೆವೆಲ್ ಆದ 17840 ರವರೆಗೆ ಏರಿಕೆಯಾಯಿತು. ನಂತರ ಲಾಭನಗಧೀಕರಣದ ಪರಿಣಾಮ ಇಳಿಕೆ ಕಂಡು 17720 ರವರೆಗೆ ಕುಸಿಯಿತು. ಮಧ್ಯಾಹ್ನ 2 ಗಂಟೆ ನಂತರ ಪುನಃ ಪುಟಿದ್ದೆದ್ದು ದಿನದ ಅಂತ್ಯಕ್ಕೆ 49 ಅಂಕಗಳ ಏರಿಕೆಯೊಂದಿಗೆ 17786 ರಲ್ಲಿ ಮುಕ್ತಾಯವಾಯಿತು. ಸೆನ್ಸೆಕ್ಸ್ 203 ಅಂಕಗಳ ಹೆಚ್ಚಳದೊಂದಿಗೆ 59959 ರಲ್ಲಿ ಅಂತ್ಯಗೊಂಡಿತು. ಅದೇ ರೀತಿ ದಿನಪೂರ್ತಿ ಮಾರಾಟ ಒತ್ತಡಕ್ಕೆ ಒಳಗಾಗಿದ್ದ ಬ್ಯಾಂಕ್ ನಿಫ್ಟಿ 308 ಅಂಶಗಳ ಇಳಿಕೆಯೊಂದಿಗೆ 40990 ರಲ್ಲಿ ವಹಿವಾಟು ಪೂರ್ಣಗೊಳಿಸಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 1 ರಷ್ಟು ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ 0.26 ರಷ್ಟು ಇಳಿಕೆ ದಾಖಲಿಸಿತು. ಮಾರುಕಟ್ಟೆಯ ಏರಿಳಿತ ಸೂಚ್ಯಂಕ ಇಂಡಿಯಾ ವಿಕ್ಸ್ ಶೇ. 4ರಷ್ಟು ಕುಸಿತವಾಯಿತು. ವಾಹನೋಧ್ಯಮ, ಇಂಧನ, ಮೂಲಭೂತ ಸೌಕರ್ಯ ಸೂಚ್ಯಂಕಗಳು ಏರಿಕೆಯಾದರೆ ಔಷಧ, ಲೋಹ, ಮಾಧ್ಯಮ ಮತ್ತು ಐಟಿ ವಲಯದ ಸೂಚ್ಯಂಕಗಳು ಇಳಿಕೆ ಕಂಡವು.
ಉತ್ತಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ ಪರಿಣಾಮ ಮಾರುತಿ ಸುಜುಕಿ ಶೇ. 5ರಷ್ಟು ಏರಿಕೆಯಾಯಿತು, ಅದೇ ರೀತಿ ನಿನ್ನೆ ಪ್ರತಿಕೂಲ ತ್ರೈಮಾಸಿಕ ಫಲಿತಾಂಶ ಪ್ರಕಟದ ಕಾರಣದಿಂದ ಎಸ್ಬಿಐ ಕಾರ್ಡ್ ಮತ್ತು ಟಾಟಾ ಕೆಮಿಕಲ್ಸ್ ಕಂಪನಿ ಶೇ, 5 ರಷ್ಟು ಇಳಿಕೆಯಾದವು.
ಇಂದೂ ಸಹ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1568 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 613 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.