ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2023ರಲ್ಲಿ ( Sensex ) ಹಲವಾರು ಮೈಲಿಗಲ್ಲುಗಳನ್ನು ದಾಟಿ 11,000 ಅಂಕ ಹೈ ಜಂಪ್ ಸಾಧಿಸುವಲ್ಲಿ ಸಫಲವಾಗಿದೆ. ಮಾತ್ರವಲ್ಲದೆ 2024ರಲ್ಲಿ ಮತ್ತಷ್ಟು ದಾಖಲೆಯ ಎತ್ತರಕ್ಕೇರುವ ನಿರೀಕ್ಷೆ ಮೂಡಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಾಯಿತವಾಗಿರುವ ಎಲ್ಲ ಷೇರುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 363 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ 81 ಲಕ್ಷ ಕೋಟಿ ರೂ. ವೃದ್ಧಿಸಿದೆ. ಈ ವರ್ಷ ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್‌ಗಳ ಗಡಿಯನ್ನೂ ದಾಟಿತ್ತು. ಭಾರತೀಯ ರಿಟೇಲ್ ಹೂಡಿಕೆದಾರರು ಈ ವರ್ಷ ಗಣನೀಯ ಹೂಡಿಕೆಯನ್ನು ಮಾಡಿರುವುದು ಗಮನಾರ್ಹ.
ಸ್ಮಾಲ್ ಕ್ಯಾಪ್ ಬಿಗ್ ರಿಟರ್ನ್ಸ್: ಷೇರು ಮಾರುಕಟ್ಟೆಯಲ್ಲಿ ಸಣ್ಣ ಮಾರುಕಟ್ಟೆ ಬಂಡವಾಳ ಮೌಲ್ಯದ ಷೇರುಗಳು ಹೂಡಿಕೆದಾರರಿಗೆ 2023ರಲ್ಲಿ ಹೆಚ್ಚು ಆದಾಯವನ್ನು ತಂದುಕೊಟ್ಟಿವೆ. ನಿಫ್ಟಿ 20% ಆದಾಯ ಕೊಟ್ಟರೆ 238 ಕಂಪನಿಗಳು 2,961% ರಿಟರ್ನ್ಸ್ ತಂದು ಕೊಟ್ಟಿವೆ.
ನಿಫ್ಟಿ ಮಿಡ್ ಕ್ಯಾಪ್ 50 ಇಂಡೆಕ್ಸ್ 50% ಏರಿಕೆ ಕಂಡಿದೆ. ನಿಫ್ಟಿ ಸ್ಮಾಲ್ ಕ್ಯಾಪ್ 100 ಇಂಎಕ್ಸ್ 55% ಏರಿಕೆ ದಾಖಲಿಸಿದೆ. ಎಲ್ಲ ವಲಯಾವಾರು ಇಂಡೆಕ್ಸ್‌ಗಳು ಗ್ರೀನ್ ಝೋನ್‌ನಲ್ಲಿ 2023ರ ವಹಿವಾಟನ್ನು ಅಂತ್ಯಗೊಳಿಸಿವೆ. ನಿಫ್ಟಿ ರಿಯಾಲ್ಟಿ 80% ಮತ್ತು ನಿಫ್ಟಿ ಆಟೋ 46% ಏರಿಕೆ ದಾಖಲಿಸಿವೆ. ಬ್ಲೂಚಿಪ್ ನಿಫ್ಟಿ 50 ಅಡಿಯಲ್ಲಿ ಟಾಟಾ ಮೋಟಾರ್ಸ್ ಮಾತ್ರ ಹೂಡಿಕೆದಾರರ ಹಣವನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದೆ. ನಿಫ್ಟಿಯಲ್ಲಿ ಎನ್‌ಟಿಪಿಸಿ 87% ರಿಟರ್ನ್ ಕೊಟ್ಟಿದೆ.
ಬಜಾಜ್ ಆಟೊ, ಎಲ್ &ಟಿ, ಕೋಲ್ ಇಂಡಿಯಾ, ಹೀರೊ ಮೊಟೊ ಕಾರ್ಪ್ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೆನ್ನಿಸಿವೆ. ಮ್ಯೂಚುವಲ್ ಫಂಡ್‌ಗಳ ನೇತೃತ್ವದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ಈಕ್ವಿಟಿ ಮಾರುಕಟ್ಟೆಗೆ 2023ರಲ್ಲಿ 1.8 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ. ವಿದೇಶಿ ಹೂಡಿಕೆದಾರರು 1.6 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯದ ಷೇರು ಖರೀದಿ ನಡೆಸಿದ್ದಾರೆ. ಬಿಎಸ್‌ಇ ಎಸ್‌ಎಂಇ ಐಪಿಒ ಇಂಡೆಕ್ಸ್ ಈ ವರ್ಷ 97% ಏರಿಕೆ ದಾಖಲಿಸಿದೆ.
ಇದನ್ನೂ ಓದಿ : Stock Market: ದಾಖಲೆ ಬರೆದ ಷೇರು ಪೇಟೆ, 72,098 ಅಂಕ ತಲುಪಿದ ಸೆನ್ಸೆಕ್ಸ್!
ಐಪಿಒಗಳ ಪೈಕಿ ಟಾಟಾ ಟೆಕ್ನಾಲಜೀಸ್, ಸಿಯೆಂಟ್ ಡಿಎಲ್‌ಎಂ, ಸೆನ್ಕೊ ಗೋಲ್ಡ್, ಐಆರ್‌ಇಡಿಎ, ಇಎಂಎಸ್, ಉತ್ಕರ್ಷ್ ಎಸ್‌ಎಫ್‌ಬಿ, ವಿಷ್ಣು ಪ್ರಕಾಶ್ ಪುಂಗ್ಲಿಯಾ, ಸಿಗ್ನೇಚರ್ ಗ್ಲೋಬಲ್ ಷೇರುಗಳು ಹೂಡಿಕೆದಾರರಿಗೆ ಲಾಭದಾಯಕವೆನ್ನಿಸಿವೆ. ಸತತ ಎಂಟು ವರ್ಷಗಳಿಂದ ನಿಫ್ಟಿ ಸಕಾರಾತ್ಮಕ ರಿಟರ್ನ್ ಕೊಟ್ಟಿದೆ. ಐಸಿಐಸಿಐ ಡೈರೆಕ್ಟ್ ಸಂಸ್ಥೆಯ ವರದಿಯ ಪ್ರಕಾರ 2024ರಲ್ಲಿ ಸೆನ್ಸೆಕ್ಸ್ 83,250 ಅಂಕಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ನಿಫ್ಟಿ 25,000 ಅಂಕಗಳಿಗೆ ಜಿಗಿಯುವ ಸಾಧ್ಯತೆ ಇದೆ.