ಮುಂಬಯಿ: ಷೇರು ಪೇಟೆ ಸಾರ್ವಕಾಲಿಕ ಏರಿಕೆಯ ಹಂತದಲ್ಲಿ ಹೂಡಿಕೆದಾರರು ಗೊಂದದಲ್ಲಿದ್ದಂತೆ ಕಾಣುತ್ತಿದ್ದು, ಲಾಭ ನಗದೀಕರಣಕ್ಕೆ ಮುಂದಾಗುತ್ತಿದ್ದಾರೆ. ಬ್ಯಾಂಕ್ ನಿಫ್ಟಿ ಇಂದು ಸಾರ್ವಕಾಲಿಕ ಏರಿಕೆ ದಾಖಲಿಸಿದ ತಕ್ಷಣ ಇಳಿಕೆಯ ಕಡೆ ಮುಖ ಮಾಡಿತು.
ಜಾಗತಿಕ ಮಾರುಕಟ್ಟೆಯ ಏರಿಕೆಯ ಪರಿಣಾಮ ಭಾರತದ ನಿಫ್ಟಿ 85 ಅಂಕಗಳ ಏರಿಕೆಯೊಂದಿಗೆ 18288 ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 119 ಅಂಶಗಳ ಹೆಚ್ಚಳದೊಂದಿಗೆ 61304 ರಲ್ಲಿ ಆರಂಭವಾಯಿತು. ಬ್ಯಾಂಕ್ ನಿಫ್ಟಿ 228 ಅಂಕಗಳ ಏರಿಕೆಯೊಂದಿಗೆ 41914 ರಲ್ಲಿ ಶುರುವಾಯಿತು,
ದೇಶಿ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಹೂಡಿಕೆಯ ಪರಿಣಾಮ ಮಾರುಕಟ್ಟೆಯು ಸಾರ್ವಕಾಲಿಕ ಏರಿಕೆಯ ಹಂತದಲ್ಲಿರವುದರಿಂದ ಟೆಕ್ನಿಕಲಿ ಓವರ್ ಬಾಟ್ ಜೋನ್ (OVER BOUGHT ZONE) ನಲ್ಲಿದೆ. ಹೂಡಿಕೆದಾರರು ಮಾರುಕಟ್ಟೆ ಪ್ರಾರಂಭವಾದ ತಕ್ಷಣ ಲಾಭಾಂಶ ನಗದೀಕರಣಕ್ಕೆ ಮುಂದಾಗಿದ್ದರಿಂದ ನಿಫ್ಟಿ ಇಳಿಮುಖವಾಯಿತು. ನಂತರ ದಿನಪೂರ್ತಿ ಇಳಿಕೆಯ ಹಾದಿಯಲ್ಲಿ ವಹಿವಾಟು ನಡೆದರೂ ಕೊನೆಯ ಒಂದು ಗಂಟೆಯಲ್ಲಿ ಭಾರಿ ಏರಿಳಿಕೆ ದಾಖಲಾಯಿತು. ಬ್ಯಾಂಕ್ ನಿಫ್ಟಿ ಮಧ್ಯಾಹ್ನ ಸಾರ್ವಕಾಲಿಕ ಏರಿಕೆ 41948 ನ್ನು ಮುಟ್ಟಿದ್ದು, ಟೆಕ್ನಿಕಲಿ ಇದು ಟ್ರಿಪಲ್ ಟಾಪ್ (TRIPLE TOP) ಆಗಿದ್ದರಿಂದ ಹೂಡಿಕೆದಾರರ ಲಾಭಾಂಶ ನಗದೀಕರಣದ ಪರಿಣಾಮ ಇಳಿಮುಖವಾಯಿತು.
ದಿನದ ಅಂತ್ಯಕ್ಕೆ ನಿಫ್ಟಿ 45 ಅಂಕಗಳ ಇಳಿಕೆಯೊಂದಿಗೆ 18187 ರಲ್ಲಿ ಮತ್ತು ಸೆನ್ಸೆಕ್ಸ್ 151 ಅಂಶಗಳ ಕಡಿತದೊಂದಿಗೆ 61033 ರಲ್ಲಿ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 96 ಅಂಕಗಳ ಏರಿಕೆಯೊಂದಿಗೆ 41783 ರಲ್ಲಿ ಅಂತ್ಯಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ.0.56 ರಷ್ಟು ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.73 ರಷ್ಟು ಇಳಿಕೆಯಾಯಿತು. ಸಾರ್ವಜನಿಕ ಬ್ಯಾಂಕಿಂಕ್ ಮತ್ತು ಎಫ್ಎಂಸಿಜಿ ಸೂಚ್ಯಂಕಗಳು ಏರಿಕೆ ಕಂಡವು. ಅದೇ ರೀತಿ ಫಾರ್ಮಾ, ರಿಯಾಲಿಟಿ, ಮೂಲಭೂತ ಸೌಕರ್ಯ ಮತ್ತು ಲೋಹ ಕಂಪನಿಗಳ ಸೂಚ್ಯಂಕ ಇಳಿಕೆ ದಾಖಲಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 386 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರೆ ದೇಶಿ ಸಾಂಸ್ಥಿಕ ಹೂಡಿಕೆದಾರರು 1060 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಕ್ರಿಪ್ಟೋ ಮಾರುಕಟ್ಟೆ ತಲ್ಲಣ : ಜಾಗತಿಕವಾಗಿ ಕ್ರಿಫ್ಟೋ ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಉಂಟಾಗಿದ್ದು, ಪ್ರಮುಖ ಕರೆನ್ಸಿಗಳಾದ ಬಿಟ್ ಕಾಯಿನ್ ಮತ್ತು ಎಥಿರಿಎಂ ಕರೆನ್ಸಿಗಳು ಇಳಿಕೆಯಾಗುತ್ತಿವೆ. ಬಿಟ್ ಕಾಯಿನ್ ಶೇ. 6 ಮತ್ತು ಎಥಿರಿಎಂ ಶೇ. 15 ರಷ್ಟು ಕುಸಿತವಾಗಿವೆ