ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಮಧ್ಯಂತರ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ಏರಿಕೆಯಾಯಿತು. (Sensex hits all time high) 2022ರ ಡಿಸೆಂಬರ್‌ನಲ್ಲಿ ದಾಖಲಿಸಿದ್ದ ಎತ್ತರವನ್ನೂ ಹಿಂದಿಕ್ಕಿತು. ಸೆನ್ಸೆಕ್ಸ್ ಈ ಹಿಂದೆ 63,583 ಅಂಕ ಗಳಿಸಿತ್ತು. ಸೆನ್ಸೆಕ್ಸ್ 260 ಅಂಕ ಏರಿಕೊಂಡು 63,583ರ ಸಾರ್ವಕಾಲಿಕ ಎತ್ತರಕ್ಕೇರಿತು. ಬಳಿಕ ಸೆಲ್ಲಿಂಗ್ ಪ್ರೆಶರ್ ಪರಿಣಾಮ ಇಳಿಯಿತು.
ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ ಸಾರ್ವಕಾಲಿಕ ಎತ್ತರದ ದಾಖಲೆಗೆ 30 ಅಂಕ ಸನಿಹದಲ್ಲಿದೆ. ಹಾಗಾದರೆ ಸೆನ್ಸೆಕ್ಸ್ ದಾಖಲೆಯ ಎತ್ತರಕ್ಕೆ ಏರಿಕೆಯಾಗಿದ್ದೇಕೆ? ಕಳೆದ ಕೆಲವು ತಿಂಗಳುಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರುಗತಿಯಲ್ಲಿದೆ. ಕೇವಲ ಭಾರತದ ಷೇರು ಮಾರುಕಟ್ಟೆ ಮಾತ್ರವಲ್ಲದೆ ಅಮೆರಿಕ, ಯುರೋಪ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ ಚೇತರಿಸುತ್ತಿದೆ.
ಹಣದುಬ್ಬರ ಇಳಿಕೆಯಾಗಿರುವುದು, ಆರ್ಥಿಕ ಬೆಳವಣಿಗೆಯ ಚೇತರಿಕೆ ಸಕಾರಾತ್ಮಕ ಪ್ರಭಾವ ಬೀರಿದೆ. ವಿದೇಶಿ ಹೂಡಿಕೆದಾರರು ಈ ವರ್ಷ ಇದುವರೆಗೆ 73 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿರುವುದು ಗಮನಾರ್ಹ. ಇದು ಮಹತ್ವದ ಸಕಾರಾತ್ಮಕ ಸಂಗತಿ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಕಾರ್ಪೊರೇಟ್ ಕಂಪನಿಗಳು ಕಳೆದ 20 ತಿಂಗಳುಗಳಿಂದ ಉತ್ತಮ ಆದಾಯ ದಾಖಲಿಸಿವೆ.
ಭಾರತದ ಆರ್ಥಿಕತೆ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಚೇತರಿಸಿರುವುದು ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಿದೆ. ಜತೆಗೆ ಹಣದುಬ್ಬರದ ಇಳಿಕೆ ಧನಾತ್ಮಕವಾಗಿತ್ತು. ಭಾರತ ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎನ್ನುತ್ತಾರೆ ತಜ್ಞರು. ಅಂತಿಮವಾಗಿ ಸೆನ್ಸೆಕ್ಸ್ 195 ಅಂಕ ಏರಿಕೊಂಡು 63,523ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಮತ್ತು ನಿಫ್ಟಿ 18,856ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ಬ್ಲೂಡಾರ್ಟ್ ಷೇರು 7%, ಪವರ್ ಗ್ರಿಡ್ 4% ಗಳಿಸಿತು. ಪವರ್ ಗ್ರಿಡ್, ಒಎನ್‌ಜಿಸಿ, ಅದಾನಿ ಪೋರ್ಟ್ಸ್ ಷೇರು ದರ ಏರಿಕೆ ದಾಖಲಿಸಿತು.
ಇದನ್ನೂ ಓದಿ: Adani stocks : ಅದಾನಿ ಷೇರುಗಳಲ್ಲಿ ಹೂಡಿಕೆಯಿಂದ 3 ತಿಂಗಳಲ್ಲಿ 10,000 ಕೋಟಿ ರೂ. ಲಾಭ ಗಳಿಸಿದ ರಾಜೀವ್ ಜೈನ್