Site icon Vistara News

Sensex | ಸೆನ್ಸೆಕ್ಸ್‌ 95 ಅಂಕ ಚೇತರಿಕೆ, ರೂಪಾಯಿ 83.09ಕ್ಕೆ ಕುಸಿತ

sensex

ಮುಂಬಯಿ: ಜಾಗತಿಕ ಹೂಡಿಕೆದಾರರ ಬೆಂಬಲ ಹಾಗೂ ಹಲವು ಕಂಪನಿಗಳ ಉತ್ತಮ ತ್ರೈಮಾಸಿಕ ಫಲಿತಾಂಶ ಮತ್ತು ಐಟಿ ಕಂಪನಿಗಳ ಬೆಂಬಲ ಷೇರು ಮಾರುಕಟ್ಟೆಗೆ (Sensex) ಸಕಾರಾತ್ಮಕ ಪರಿಣಾಮ ಉಂಟಾಯಿತು.
ಜಾಗತಿಕ ಮಾರುಕಟ್ಟೆಯ ಪರಿಣಾಮ ಇಂದು ನಿಫ್ಟಿ 89 ಅಂಕಗಳ ಇಳಿಕೆಯೊಂದಿಗೆ 17423 ರಲ್ಲಿ ಪ್ರಾರಂಭವಾದರೇ ಸೆನ್ಸೆಕ್ಸ್ 283 ಅಂಶಗಳ ಕಡಿತದೊಂದಿಗೆ 58824 ಕ್ಕೆ ಆರಂಭವಾಯಿತು. ಬ್ಯಾಂಕ್ ನಿಫ್ಟಿ 223 ಅಂಶಗಳ ಇಳಿಕೆಯೊಂದಿಗೆ 40149 ರಲ್ಲಿ ಶುರುವಾಯಿತು.
ನಿಫ್ಟಿ ಆರಂಭದಲ್ಲಿ 17420 ರಲ್ಲಿ ಸಪೋರ್ಟ್​ ತೆಗೆದುಕೊಂಡು ಮೇಲ್ಮುಕವಾಗಿ ಚಲಿಸಿತು. ಬ್ಯಾಂಕ್ ನಿಫ್ಟಿ ಸಹ ಪ್ರಮುಖ ಘಟ್ಟವಾದ 40000 ಅಂಶಗಳಿಗಿಂತ ಕೆಳಗೆ ಬಹಳ ಸಮಯದವರೆಗೆ ವಹಿವಾಟು ನಡೆಸಿತು. ಬ್ಯಾಂಕ್ ನಿಫ್ಟಿ 39900 – 40000 ಅಂಶಗಳ ಮಧ್ಯೆ ಸಪೋರ್ಟ್ ತೆಗೆದುಕೊಂಡು ಮಧ್ಯಾಹ್ನ 2 ಗಂಟೆ ನಂತರ ಚೇತರಿಕೆ ಕಂಡಿತು. ಪ್ರಮುಖವಾಗಿ ಸಾರ್ವಜನಿಕ ಬ್ಯಾಂಕಗಳು ಏರಿಕೆ ಕಂಡರೆ ಖಾಸಗಿ ವಲಯದ ಷೇರುಗಳು ಮಾರಾಟ ಒತ್ತಡ ಅನುಭವಿಸಿದವು. ಇದರ ಪರಿಣಾಮ ನಿಫ್ಟಿ ಸಕಾರಾತ್ಮಕವಾಗಿ ದಿನದ ಅಂತ್ಯವಾದರೆ ಇದಕ್ಕೆ ತದ್ವಿರುದ್ದವಾಗಿ ಬ್ಯಾಂಕ್ ನಿಫ್ಟಿ 273 ಅಂಶಗಳ ಇಳಿಕೆಯೊಂದಿಗೆ 40099ರಲ್ಲಿ ವಹಿವಾಟು ಪೂರ್ಣಗೊಂಡಿತು. ನಿಫ್ಟಿ ದಿನದ ಅಂತ್ಯಕ್ಕೆ 51 ಅಂಕಗಳ ಏರಿಕೆಯೊಂದಿಗೆ 17563 ರಲ್ಲಿ ಮುಕ್ತಾಯ ಕಂಡರೆ, ಸೆನ್ಸೆಕ್ಸ್ 95 ಅಂಶಗಳ ಹೆಚ್ಚಳದೊಂದಿಗೆ 59202 ರಲ್ಲಿ ಅಂತ್ಯಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ 0.11 ರಷ್ಟು ಏರಿಕೆ ಕಂಡರೆ ಇದಕ್ಕೆ ವಿರುದ್ದವಾಗಿ ಮಧ್ಯಮ ಕಂಪನಿಗಳ ಸೂಚ್ಯಂಕ 0.42 ರಷ್ಟು ಇಳಿಕೆ ಕಂಡಿತು. ಐಟಿ, ಲೋಹ, ಸಾರ್ವಜನಿಕ ಬ್ಯಾಂಕ್ ಮತ್ತು ಇಂಧನ ವಲಯದ ಸೂಚ್ಯಂಕಗಳು ಏರಿಕೆ ಕಂಡರೆ, ಖಾಸಗಿ ವಲಯಸ ಬ್ಯಾಂಕಿಂಗ್ ಮತ್ತು ಗ್ರಾಹಕರ ಉತ್ಪನ್ನಗಳ ಸೂಚ್ಯಂಕ ಇಳಿಕೆ ದಾಖಲಿಸಿದವು.
ಕಳೆದ ಕೆಲವು ದಿನಗಳಿಂದ ಸತತವಾಗಿ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು ಪುನಃ ಖರೀದಿದಾರ ವಲಯಕ್ಕೆ ಮರಳಿದ್ದು, 1864 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ, ಆದರೆ ದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 886 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ರೂಪಾಯಿ ಸಾರ್ವಕಾಲಿಕ ಕುಸಿತ:
ಭಾರತದ ರೂಪಾಯಿ ಇಂದು ಪುನಃ ಸಾರ್ವಕಾಲಿಕ ಕುಸಿತ ಕಂಡು 83.09 ರೂ. ನಲ್ಲಿ ವಹಿವಾಟು ನಡೆಸಿತು. ಇದರ ಪರಿಣಾಮ ರೂಪಾಯಿ ಈ ವರ್ಷ ಶೇ. 10ರಷ್ಟು ಇಳಿಕೆ ದಾಖಲಿಸಿದಂತಾಯಿತು. ದಿನದ ಅಂತ್ಯಕ್ಕೆ ರೂಪಾಯಿ ಅಲ್ಪ ಚೇತರಿಕೆ ಕಂಡು 82.76 ರೂ.ನಲ್ಲಿ ವಹಿವಾಟು ಅಂತ್ಯಗೊಳಿಸಿತು.
ತ್ರೈಮಾಸಿಕ ಫಲಿತಾಂಶ
ಇಂದು ಬಹಳ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿವೆ. ಅದರಲ್ಲಿ ಪ್ರಮುಖವಾಗಿ ಆಕ್ಸಸ್ ಬ್ಯಾಂಕ್ , ಬಜಾಜ್ ಫೈನಾನ್ಸ್ , ಕೆನರಾ ಬ್ಯಾಂಕ್, ಯುನಿಯನ್ ಬ್ಯಾಂಕ್ ಮತ್ತು ಟಾಟಾ ಕನ್ಸೂಮರ್ಸ್ ಕಂಪನಿಗಳು ಇಂದು ಉತ್ತಮ ಫಲಿತಾಂಶ ಪ್ರಕಟಿಸಿವೆ. ಆದರೆ ಏಷಿಯನ್ ಪೈಂಟ್ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ.
ನಾಳೆ ಸಹ ಬಹಳ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟಣೆಯಾಗಲಿವೆ. ಅದರಲ್ಲಿ ಪ್ರಮುಖವಾಗಿ ದಿಗ್ಗಜ ಕಂಪನಿ ರಿಲಯನ್ಸ್ ತನ್ನ ತ್ರೈಮಾಸಿಕ ಫಲಿತಾಂಶವನ್ನು ಮಾರುಕಟ್ಟೆ ವಹಿವಾಟು ಅವಧಿಯ ನಂತರ ಪ್ರಕಟಿಸಲಿದೆ. ಇದರ ಪರಿಣಾಮ ಸೋಮವಾರ ಕಂಡುಬರಲಿದೆ.
ಬಜಾಜ್ ಫಿನಸರ್ವ್​, ಬಜಾಜ್ ಹೋಲಡಿಂಗ್ಸ್, ಬಿರ್ಲಾಸಾಫ್ಟ್, ಡಿಎಲ್ಎಫ್, ಹೆಚ್ಡಿಎಫ್ಸಿ ಲೈಫ್, ಹೆಚ್ಯುಎಲ್, ಹಿಂದೂಸ್ತಾನ ಜಿಂಕ್, ಐಡಿಬಿಐ ಬ್ಯಾಂಕ್, ಐಆರ್ಬಿ ಇನ್ಫ್ರಾ, ಜೆಎಸಡ್ಬ್ಲೂ ಸ್ಟೀಲ್, ಲೋರಸ್ ಲ್ಯಾಬ್, ಎಸ್ಬಿಐ ಲೈಫ್, ಟೋರಾಂಟೋ ಫಾರ್ಮಾ, ಯುನೈಟೆಡ್ ಸ್ಪೀರಿಟ್ಸ್ ಮತ್ತು ವಿಐಪಿ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

Exit mobile version