ಮುಂಬಯಿ: ಸತತ ಮೂರು ದಿನಗಳಿಂದ ಅಮೇರಿಕಾ ಮಾರುಕಟ್ಟೆ ಭಾರಿ ಏರಿಕೆ ಕಾಣುತ್ತಿರುವ ಪರಿಣಾಮ ಭಾರತದ ಷೇರುಪೇಟೆ ಸಹ ಸತತ ಮೂರು ದಿನಗಳಿಂದ ಏರಿಕೆಯ ಹಾದಿಯಲ್ಲಿದೆ. ಬೆಳಿಗ್ಗೆ ನಿಫ್ಟಿ 126 ಅಂಕಗಳ ಏರಿಕೆಯೊಂದಿಗೆ 17438 ಕ್ಕೆ ಪ್ರಾರಂಭವಾದರೆ, ಸೆನ್ಸೆಕ್ಸ್ (Sensex) 334 ಅಂಶಗಳ ಹೆಚ್ಚಳದೊಂದಿಗೆ 58744 ಕ್ಕೆ ಆರಂಭವಾಯಿತು, ಅದೇರೀತಿ ಬ್ಯಾಂಕ್ ನಿಫ್ಟಿ ಸಹ 331 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಆರಂಭವಾಯಿತು.
ನಿಫ್ಟಿ ಭಾರಿ ಏರಿಕೆಯೊಂದಿಗೆ ಪ್ರಾರಂಭವಾದರೂ ದಿನ ಪೂರ್ತಿ ಕೇವಲ 100 ಅಂಕಗಳ ಪರಿಮಿತಿಯಲ್ಲಿ ಏರಿಳಿತ ಕಂಡಿತು. ಬ್ಯಾಂಕ್ ನಿಫ್ಟಿ ಸಹ 40350 ರಲ್ಲಿ ಹಲವು ಸಹ ರೆಜಿಸ್ಟೇನ್ಸ್ ಕಂಡು ಮೇಲೆರಲು ಪ್ರಯತ್ನಿಸಿತು, ಆದರೆ ಮಾರಾಟ ಒತ್ತಡ ಅನುಭವಿಸಿ ಕೆಳಗೆ ಇಳಿಯುತ್ತಿತ್ತು. ದಿನ ಪೂರ್ತಿ ಕೇವಲ 400 ಅಂಕಗಳ ಮಧ್ಯೆ ವಹಿವಾಟು ನಡೆಯಿತು.
ದಿನದ ಅಂತ್ಯಕ್ಕೆ ನಿಫ್ಟಿ 175 ಅಂಕಗಳ ಏರಿಕೆಯೊಂದಿಗೆ 17486 ರಲ್ಲಿ ಮತ್ತು ಸೆನ್ಸೆಕ್ಸ್ 549 ಅಂಶಗಳ ಹೆಚ್ಚಳದೊಂದಿಗೆ 58960 ಕ್ಕೆ ವಹಿವಾಟು ಅಂತ್ಯಗೊಳಿಸಿತು. ಬ್ಯಾಂಕ್ ನಿಫ್ಟಿ ಸಹ 398 ಅಂಕಗಳ ಏರಿಕೆಯೊಂದಿಗೆ 40318 ರಲ್ಲಿ ಮುಕ್ತಾಯಕಂಡಿತು.
ಅಮೇರಿಕಾದ ಮಾರುಕಟ್ಟೆ ಓವರ್ ಸೋಲ್ಡ್ ಜೋನಲ್ಲಿರುವುದರಿಂದ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಸೇರಿದಂತೆ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ ಕೆಲವು ಕಂಪನಿಗಳು ನಿರೀಕ್ಷೆಗಿಂತ ಉತ್ತಮ ವರದಿ ಪ್ರಕಟಿಸಿದ್ದರ ಪರಿಣಾಮ ಭಾರಿ ಏರಿಕೆ ಕಾಣುತ್ತಿದೆ. ಅದೇ ರೀತಿ ಭಾರತದಲ್ಲಿ ಇಲ್ಲಿಯವರೆಗೆ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ ಕಂಪನಿಗಳಲ್ಲಿ ಬಹುತೇಕ ಕಂಪನಿಗಳು ಮತ್ತು ಬ್ಯಾಂಕ್ ಗಳು ಉತ್ತಮ ವರದಿ ನೀಡಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಅಂಶವಾಗಿದೆ. ಅದೇ ರೀತಿ ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿಗೆ ಮುನ್ನ ಭಾರತದ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಚಲನೆ ಕಂಡುಬರುತ್ತಿದೆ.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.76 ರಷ್ಟು ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 1.60 ಏರಿಕೆಯಾಯಿತು. ಸಾರ್ವಜನಿಕ ವಲಯದ ಬ್ಯಾಂಕಗಳು, ಮಾಧ್ಯಮ, ವಾಹನೋಧ್ಯಮ, ಐಟಿ, ಎಫ್ಎಂಸಿಜಿ ವಲಯ ಸೇರಿದಂತೆ ಎಲ್ಲ ಸೂಚ್ಯಂಕಗಳು ಏರಿಕೆ ಕಂಡವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು ಭಾರಿ ಏರಿಕೆಯ ಮಧ್ಯದಲ್ಲೂ 153 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 2084 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೊಂಡುಕೊಂಡರು.
ತೈಲ ಅಗ್ಗ : ಆರ್ಥಿಕ ಹಿಂಜರಿತದ ಭೀತಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರಿ ಏರಿಳಿತಕ್ಕೆ ಕಾರಣವಾಗುತ್ತಿದೆ. ಒಂದು ಬ್ಯಾರಲ್ ಗೆ 85 ಡಾಲರ್ ಗೆ ಕುಸಿದ್ದಿದ್ದ ತೈಲ ನಂತರ ಒಪೆಕ್ ಸಭೆ ನಂತರ 93 ಡಾಲರ್ ಹತ್ತಿರ ವಹಿವಾಟು ನಡೆಯುತ್ತಿತ್ತು. ಇದೀಗ ಪುನಃ ಕಡಿಮೆ ಆಗುತ್ತಿದ್ದು 83 ಡಾಲರ್ ಗೆ ವಹಿವಾಟು ನಡೆಯುತ್ತಿದೆ.
ತ್ರೈಮಾಸಿಕ ಫಲಿತಾಂಶ : ನಾಳೆ ಪ್ರಮುಖ ಸಿಮೆಂಟ್ ಕಂಪನಿಯಾದ ಆಲ್ಟ್ರಾಟೆಕ್ ಮತ್ತು ಹಾವೆಲ್ಸ್ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.