ಮುಂಬಯಿ: ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವದಿಂದ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 578 ಅಂಕಗಳ ಚೇತರಿಕೆ ದಾಖಲಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 194 ಅಂಕಗಳ ಏರಿಕೆಯೊಂದಿಗೆ 17,816ಕ್ಕೆ ದಿನದ ವಹಿವಾಟು (Sensex ) ಮುಕ್ತಾಯಗೊಳಿಸಿತು.
ಬ್ಯಾಂಕ್ ನಿಫ್ಟಿ ಸಹ 399 ಅಂಕಗಳ ಏರಿಕೆಯೊಂದಿಗೆ 41304ರಲ್ಲಿ ಪ್ರಾರಂಭವಾಗಿ ದಿನದ ಅಂತ್ಯಕ್ಕೆ 563 ಏರಿಕೆಯೊಂದಿಗೆ 41468ಕ್ಕೆ ಮುಕ್ತಾಯಗೊಳಿಸಿತು.
ಬ್ಯಾಂಕ್ ನಿಫ್ಟಿಯ ಪ್ರಮುಖ ಘಟ್ಟವಾದ 41000ಕ್ಕೂ ಮೇಲ್ಮಟ್ಟದಲ್ಲಿ ವಹಿವಾಟು ಮುಗಿದಿರುವುದರಿಂದ ಸಾರ್ವಕಾಲಿಕ ಏರಿಕೆಯನ್ನು ಶೀಘ್ರದಲ್ಲಿ ದಾಖಲಿಸುವ ಸಾಧ್ಯತೆ ಇದೆ. ಸಣ್ಣ (1.11%) ಮತ್ತು ಮಧ್ಯಮ (1.43%) ಷೇರುಗಳ ಸೂಚಂಕ್ಯಗಳು ಸಹ ಏರಿಕೆ ಕಂಡವು.
ದಿನದ ಮಧ್ಯಭಾಗದಲ್ಲಿ ನಿಫ್ಟಿ 17900 ಅಂಕಗಳನ್ನು ದಾಟಿ ಭಾರಿ ಏರಿಕೆಯನ್ನು ದಾಖಲಿಸಿತ್ತು. ದಿನದ ಏರಡನೇ ಭಾಗದಲ್ಲಿ ಲಾಭಾಂಶ ನಗಧೀಕರಣ, ಪ್ಯೂಚರ್ ಅಂಡ್ ಆಫ್ಷನ್ ಮಾರುಕಟ್ಟೆಯ ಫಿನ್ ನಿಫ್ಟಿಯ ವಾರಾಂತ್ಯ ವಹಿವಾಟು ಪೂರ್ಣಗೊಳಿಸುವಿಕೆ ಮತ್ತು ಅಮೇರಿಕಾದ ಎರಡು ವರ್ಷಗಳ ಬಾಂಡ್ ನ ಇಳುವರಿ 3.97% ಗೆ ಏರಿಕೆಯಾಗಿದ್ದರಿಂದ ಷೇರುಪೇಟೆ ಬೆಳಗಿನ ಭಾರಿ ಏರಿಕೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಔಷಧ, ಲೋಹ, ರಿಯಾಲಿಟಿ, ವಾಹನೋಧ್ಯಮ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಏರಿಕೆಯನ್ನು ಕಂಡವು.
ಅಮೆರಿಕದ ಫೆಡರಲ್ ರಿಸರ್ವ್ ನೀತಿ ಎಫೆಕ್ಟ್: ಅಮೇರಿಕಾದ ಫೆಡರಲ್ ರಿಸರ್ವ್, ಬುಧವಾರ ಸಂಜೆ ಬಡ್ಡಿದರ ಏರಿಸುವ ಸಾಧ್ಯತೆ ಇದೆ. ಈಗಾಗಲೇ ಮಾರುಕಟ್ಟೆ 0.75% ರಷ್ಟು ಏರಿಸಬಹುದು ಎಂದು ಅಂದಾಜಿಸಿದೆ. ಆಕಸ್ಮಾತ್ ಶೇ. 1ರಷ್ಟು ಬಡ್ಡಿದರವನ್ನು ಫೆಡರಲ್ ಬ್ಯಾಂಕ್ ಏರಿಸಿದರೆ ಷೇರುಪೇಟೆ ಇಳಿಕೆ ಕಾಣುವ ಸಾಧ್ಯತೆ ಇದೆ. ಫೆಡರಲ್ ಬ್ಯಾಂಕ್ ಶೇ.1 ರಷ್ಟು ಬಡ್ಡಿದರವನ್ನು ಏರಿಸಿದರೆ ಭಾರತದ ರಿಸರ್ವ್ ಬ್ಯಾಂಕ್ ಮೇಲೆ ಬಡ್ಡಿದರ ಹೆಚ್ಚು ಏರಿಸುವ ಒತ್ತಡ ಜಾಸ್ತಿಯಾಗಲಿದೆ ಇದರಿಂದ ಭಾರತದ ಷೇರು ಮಾರುಕಟ್ಟೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವುದನ್ನು ಅಲ್ಲಗಳೆಯಲಾಗುವುದಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ.