ಮುಂಬಯಿ: ಅಮೇರಿಕಾ ಮಾರುಕಟ್ಟೆ ನಿನ್ನೆ ರಾತ್ರಿ ಭಾರಿ ಏರಿಕೆ ಕಂಡ ಪರಿಣಾಮ ಇಂದು ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ನಿಫ್ಟಿ 307 ಅಂಕಗಳ ಭಾರಿ ಏರಿಕೆಯೊಂದಿಗೆ 17322 ಕ್ಕೆ ಪ್ರಾರಂಭವಾದರೆ, ಸೆನ್ಸೆಕ್ಸ್ 927 ಅಂಶಗಳ ಏರಿಕೆಯೊಂದಿಗೆ 58162 ಕ್ಕೆ ಆರಂಭವಾಯಿತು. ಬ್ಯಾಂಕ್ ನಿಫ್ಟಿ 822 ಅಂಕಗಳ ಹೆಚ್ಚಳದೊಂದಿಗೆ 39446 ಅಂಕಗಳೊಂದಿಗೆ ಸಕಾರಾತ್ಮಕವಾಗಿ ವಹಿವಾಟು ಶುರುವಾಯಿತು.
ಗುರುವಾರ ರಾತ್ರಿ ಅಮೇರಿಕದ ಹಣದುಬ್ಬರ ನಿರೀಕ್ಷೆಗೂ ಮೀರಿ ಹೆಚ್ಚಿಗೆ ಬಂದರೂ ಅಲ್ಲಿನ ಷೇರು ಮಾರುಕಟ್ಟೆ ಪ್ರಾರಂಭದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ವಹಿವಾಟು ಆರಂಭವಾದ ಸ್ವಲ್ಪ ಹೊತ್ತಿನ ನಂತರ ಕುಸಿದಷ್ಟೇ ವೇಗವಾಗಿ ಭಾರಿ ಪ್ರಮಾಣದಲ್ಲಿ ಪುಟಿದ್ದೆದ್ದಿತ್ತು.
ಅಮೇರಿಕಾದ ಷೇರುಪೇಟೆ ಕೆಲವು ತಿಂಗಳಿಂದ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದ್ದು ತಾಂತ್ರಿಕವಾಗಿ ಓವರ್ ಸೋಲ್ಡ್ ಜೋನ್ (OVERSOLD ZONE) ನಲ್ಲಿದೆ. ಹಣದುಬ್ಬರ ದರ ನಿರೀಕ್ಷೆಗೂ ಮೀರಿ ಹೆಚ್ಚಿಗೆ ಬಂದರೂ ಹಣದುಬ್ಬರ ದರ ಏರಿಕೆ ಪೂರ್ಣಗೊಂಡಿದೆ ಮತ್ತು ಇನ್ನು ಮುಂದೆ ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ಭಾವಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿತು.
ಇದರ ಪರಿಣಾಮ ಭಾರತ ಷೇರು ಸೂಚ್ಯಂಕಗಳು ಭಾರಿ ಏರಿಕೆ ಕಂಡಿತು. ವಹಿವಾಟು ಆರಂಭದ ನಂತರ ಮಾರುಕಟ್ಟೆ ಇನ್ನೂ ಮೇಲಕ್ಕೆ ಏರಲು ಪ್ರಯತ್ನ ಪಟ್ಟರೂ, ಪ್ರಮುಖ ರೆಸಿಸ್ಟೇನ್ಸ್ (RESISTANCE) ಆದ 17350 ಗಡಿ ದಾಟಲು ವಿಫಲವಾಯಿತು. ಮಧ್ಯಾಹ್ನ 12 ಗಂಟೆವರೆಗೂ ಅಲ್ಪ ಏರಿಳಿತ ಕಂಡ ಮಾರುಕಟ್ಟೆ ನಂತರ ಕುಸಿತ ಕಂಡಿತು. ದಿನದ ಅಂತ್ಯಕ್ಕೆ ನಿಫ್ಟಿ 171 ಅಂಕಗಳ ಹೆಚ್ಚಳದೊಂದಿಗೆ 17185 ಕ್ಕೆ ಮತ್ತು ಸೆನ್ಸೆಕ್ಸ್ 684 ಅಂಶಗಳ ಏರಿಕೆಯೊಂದಿಗೆ 57919 ಕ್ಕೆ ವಹಿವಾಟು ಪೂರ್ಣಗೊಂಡಿತು. ಬ್ಯಾಂಕ್ ನಿಫ್ಟಿ 681 ಅಂಕಗಳ ಹೆಚ್ಚುವರಿಯೊಂದಿಗೆ 39305 ಅಂಶಗಳಿಗೆ ವಹಿವಾಟು ಅಂತ್ಯಗೊಂಡಿತು. ನಿನ್ನೆ ಮಾರುಕಟ್ಟೆ ತ್ರಾಂತ್ರಿಕವಾಗಿ 200 ದಿನದ ಮೂವಿಂಗ್ ಆವರೇಜ್ ನಲ್ಲಿ ಸರ್ಪೋಟ್ ತೆಗೆದುಕೊಂಡಿತ್ತು.
ಷೇರುಪೇಟೆ ಭಾರಿ ಏರಿಕೆ ಪರಿಣಾಮ ಮಾರುಕಟ್ಟೆ ಏರಿಳಿತದ ಸೂಚ್ಯಂಕವಾದ ಇಂಡಿಯಾ ವಿಕ್ಸ್ ಶೇ 10ರಷ್ಟು ಕುಸಿತ ಕಂಡಿತು. ಸಣ್ಣ ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಬೆಳಿಗ್ಗೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡರೂ ದಿನದ ಅಂತ್ಯದಲ್ಲಿ ಕುಸಿತ ಕಂಡವು.
ಐಟಿ, ಬ್ಯಾಂಕಿಂಗ್ ಮತ್ತು ಸೇವಾ ವಲಯದ ಷೇರುಗಳು ಏರಿಕೆ ಕಂಡರೆ, ತೈಲ ಮತ್ತು ಗ್ಯಾಸ್, ಇಂಧನ ಮತ್ತು ರಿಯಾಲಿಟಿ ವಲಯದ ಷೇರುಗಳು ಕುಸಿತ ಕಂಡವು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕುಸಿಯುತ್ತಿದೆ. ಅದೇ ರೀತಿ ಚಿನ್ನ ಮತ್ತು ಬೆಳ್ಳಿ ದರಗಳು ಕಡಿಮೆಯಾಗುತ್ತಿವೆ. ಭಾರತದಲ್ಲಿ ಚಿನ್ನ 335 ಮತ್ತು ಬೆಳ್ಳಿ 700 ರೂ ಕುಸಿತ ಕಂಡಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು ಭಾರಿ ಏರಿಕೆಯ ಮಧ್ಯದಲ್ಲೂ 1011 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 1624 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡರು.
ತ್ರೈಮಾಸಿಕ ಫಲಿತಾಂಶ
ಇಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ ಬಜಾಜ್ ಆಟೋ ಮತ್ತು ಫೆಡರಲ್ ಬ್ಯಾಂಕಗಳು ಉತ್ತಮ ಫಲಿತಾಂಶ ಪ್ರಕಟಿಸಿವೆ. ನಾಳೆ ಭಾರತದ ಪ್ರಮುಖ ಖಾಸಗಿ ಬ್ಯಾಂಕ್ ಆದ ಹೆಚ್ಡಿಎಫ್ಸಿ ಬ್ಯಾಂಕ್ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ. ಜೊತೆಗೆ ಡಿಮಾರ್ಟ್ ಮತ್ತು ಎಲ್ ಆಂಡ್ ಟಿ ಇನ್ಫೋಟೆಕ್ ಫಲಿತಾಂಶ ಪ್ರಕಟಿಸಲಿವೆ.
ನಿನ್ನೆ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದ ಇನ್ಫೋಸಿಸ್ ಇಂದು ಉತ್ತಮ ಮಹಿವಾಟು ನಡೆಸಿ ಶೇ. 3.8 ರಷ್ಟು ಹೆಚ್ಚಳದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.