ಮುಂಬಯಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಸತತ ಮಾರಾಟದ ಒತ್ತಡದಿಂದ ಷೇರುಪೇಟೆ ಇಂದು ಏರಿಳಿತವಾಗಿ ದಿನದ ಅಂತ್ಯಕ್ಕೆ ಅಲ್ಪ ಅಂಕಗಳ ಏರಿಕೆಯನ್ನು ದಾಖಲಿಸಿದೆ. ಜೊತೆಗೆ ಬ್ಯಾಂಕ್ ನಿಫ್ಟಿ ಸಾರ್ವಕಾಲಿಕ (Sensex) ಏರಿಕೆಯನ್ನು ಕಂಡಿದೆ
ಜಾಗತಿಕ ಮಾರುಕಟ್ಟೆಯ ಬೆಂಬಲದಿಂದ ನಿಫ್ಟಿ 81 ಅಂಕಗಳ ಉತ್ತಮ ಏರಿಕೆಯೊಂದಿಗೆ 18325 ರಲ್ಲಿ ಆರಂಭವಾಯಿತು. ಆದರೆ ಪ್ರಾರಂಭವಾದ ಕೂಡಲೇ ಅಲ್ಪಾವಧಿ ಹೂಡಿಕೆದಾರರ ಲಾಭಾಂಶ ಗಳಿಕೆಯ ಪರಿಣಾಮ ಭಾರಿ ಕುಸಿತವಾಯಿತು. ನಂತರ 18250 ರ ಬಳಿ ಸಪೋರ್ಟ್ ತೆಗೆದುಕೊಂಡು ಮೇಲ್ಮುಖವಾಗಿ ಚಲಿಸಿತು. ಸೆನ್ಸೆಕ್ಸ್ ಸಹ 361 ಅಂಕಗಳ ಏರಿಕೆಯೊಂದಿಗೆ 61779 ರಲ್ಲಿ ಮತ್ತು ಬ್ಯಾಂಕ್ ನಿಫ್ಟಿ 211 ಅಂಕಗಳ ಹೆಚ್ಚಳದೊಂದಿಗೆ 42668 ಕ್ಕೆ ಶುರುವಾಯಿತು.
ಷೇರುಪೇಟೆ ಆರಂಭದಲ್ಲಿ ಕುಸಿತ ಕಂಡರೂ ಸಾರ್ವಜನಿಕ ಕ್ಷೇತ್ರದ ಬ್ಯಾಂಕಗಳ ನಿರಂತರ ಬೆಂಬಲದಿಂದ ಬ್ಯಾಂಕ್ ನಿಫ್ಟಿ ಏರುಗತಿಯಲ್ಲಿ ಸಾಗಿತು. ಬ್ಯಾಂಕ್ ನಿಫ್ಟಿ ಮೇಲ್ಮುಖ ಚಲನೆ ನಿಫ್ಟಿ ಮತ್ತು ಸೆನ್ಸೆಕ್ಸ್ ಏರುಗತಿಗೆ ಕಾರಣವಾಯಿತು. ಇದರಿಂದ ಬ್ಯಾಂಕ್ ನಿಫ್ಟಿ ಸಾರ್ವಕಾಲಿಕ ಏರಿಕೆಯನ್ನು ದಾಖಲಿಸಿತು. ದಿನದ ಕೊನೆಯ ಅರ್ಧಗಂಟೆಯಲ್ಲಿ ಷೇರುಗಳ ಮಾರಾಟ ಒತ್ತಡದಿಂದ ಮಾರುಕಟ್ಟೆ ಕುಸಿತವಾಯಿತು,
ದಿನದ ಅಂತ್ಯಕ್ಕೆ ನಿಫ್ಟಿ 23 ಅಂಕಗಳ ಏರಿಕೆಯೊಂದಿಗೆ 18267 ಕ್ಕೆ , ಸೆನ್ಸೆಕ್ಸ್ 91 ಅಂಶಗಳ ಹೆಚ್ಚಳದೊಂದಿಗೆ 61510 ರಲ್ಲಿ ಮುಕ್ತಾಯವಾಗಿದೆ. ಬ್ಯಾಂಕ್ ನಿಫ್ಟಿ 272 ಅಂಕಗಳ ಅಧಿಕ ಅಂಶದೊಂದಿಗೆ 42729 ರಲ್ಲಿ ವಹಿವಾಟು ಪೂರ್ಣಗೊಳಿಸಿದೆ.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.54 ಮತ್ತು ಮಾಧ್ಯಮ ಕಂಪನಿಗಳ ಸೂಚ್ಯಂಕ 0.52 ರಷ್ಟು ಏರಿಕೆ ದಾಖಲಿಸಿದೆ. ಬ್ಯಾಂಕಿಂಗ್, ಮಾಧ್ಯಮ, ಅನಿಲ ಮತ್ತು ಗ್ಯಾಸ್ ಸೂಚ್ಯಂಕಗಳು ಏರಿಕೆಯಾದರೇ ಲೋಹ ಮತ್ತು ಐಟಿ ಸೂಚ್ಯಂಕಗಳು ಇಳಿಕೆಯಾದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದೂ ಸಹ 789 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿದರೇ, ದೇಶಿ ಸಾಂಸ್ಥಿಕ ಹೂಡಿಕೆದಾರರು 413 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ. ಕಚ್ಚಾತೈಲ ದರ ಇಳಿಕೆಯಾದರೆ ಬೆಳ್ಳಿ ಏರಿಕೆಯಾಗಿದೆ.