ಮುಂಬಯಿ: ಸಣ್ಣ ಮತ್ತು ಮಧ್ಯಮ ಕಂಪನಿಗಳ ಉತ್ತಮ ವಹಿವಾಟಿನ ಪರಿಣಾಮ ಷೇರುಪೇಟೆ ಇಂದು ಅಲ್ಪ ಅಂಕಗಳ ಹೆಚ್ಚಳದೊಂದಿಗೆ (Sensex, Nifty) ಸಾರ್ವಕಾಲಿಕ ಏರಿಕೆ ಅಂಕಗಳಲ್ಲಿ ಅಂತ್ಯಗೊಂಡಿದೆ.
ಬೆಳಿಗ್ಗೆ ನಿಫ್ಟಿ 44 ಅಂಕಗಳ ಏರಿಕೆಯೊಂದಿಗೆ 18528 ಕ್ಕೆ ಆರಂಭವಾಯಿತು. ಸೆನ್ಸೆಕ್ಸ್ 55 ಅಂಶಗಳ ಅಧಿಕದೊಂದಿಗೆ 62327 ರಲ್ಲಿ ಪ್ರಾರಂಭವಾದರೇ, ಬ್ಯಾಂಕ್ ನಿಫ್ಟಿ 117 ಅಂಕಗಳ ಹೆಚ್ಚಳದೊಂದಿಗೆ 43192 ಕ್ಕೆ ಶುರುವಾಯಿತು.
ಬ್ಯಾಂಕ್ ನಿಫ್ಟಿ ಆರಂಭದಿಂದಲೇ ಅಲ್ಪಾವಧಿ ಹೂಡಿಕೆದಾರರು ನಗದು ಗಳಿಕೆಗೆ ಮಹತ್ವ ನೀಡಿದ್ದರ ಪರಿಣಾಮ ಕುಸಿತವಾಯಿತು. ನಿಫ್ಟಿ ಸಹ ಅಲ್ಪ ಕುಸಿತದ ನಂತರ ದಿನಪೂರ್ತಿ ಕೇವಲ 40 ಅಂಕಗಳ ಮಧ್ಯೆ ವಹಿವಾಟು ನಡೆದಿದೆ. ಸೆನ್ಸೆಕ್ಸ್ ಇಂದು ಸಹ ಸಾರ್ವಕಾಲಿಕ ಏರಿಯನ್ನು ದಾಖಲಿಸಿದರೇ, ನಿಫ್ಟಿ ಸಾರ್ವಕಾಲಿಕ ಏರಿಕೆಯ ಅಂಕಗಳಿಗಿಂತ ಕೇವಲ 100 ಅಂಶಗಳ ದೂರದಲ್ಲಿದೆ.
ದಿನದ ಅಂತ್ಯಕ್ಕೆ ನಿಫ್ಟಿ 28 ಅಂಕಗಳ ಹೆಚ್ಚಳದೊಂದಿಗೆ 18512 ರಲ್ಲಿ ಮುಕ್ತಾಯಗೊಂಡಿದೆ. ನಿಫ್ಟಿ ಮೊದಲ ಬಾರಿಗೆ
18500 ಅಂಕಗಳಿಗಿಂತ ಮೇಲೆ ವಹಿವಾಟು ಪೂರ್ಣಗೊಳಿಸಿದೆ. ಸೆನ್ಸೆಕ್ಸ್ 20 ಅಂಶಗಳ ಏರಿಕೆಯೊಂದಿಗೆ 62293 ಕ್ಕೆ ಅಂತ್ಯಗೊಂಡಿದೆ. ಬ್ಯಾಂಕ್ ನಿಫ್ಟಿ ಲಾಭಾಂಶ ನಗದೀಕರಣದಿಂದ 91 ಅಂಕಗಳ ಕುಸಿತವಾಗಿ 42983 ಅಂಕಗಳಲ್ಲಿ ಪೂರ್ಣಗೊಂಡಿದೆ.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 1.12 ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.98 ರಷ್ಟು ಏರಿಕೆಯಾಗಿದೆ. ಐಟಿ, ಆಟೋ, ಮಾಧ್ಯಮ, ಫಾರ್ಮಾ, ರಿಯಾಲಿಟಿ ವಲಯದ ಸೂಚ್ಯಂಕಗಳು ಏರಿಕೆಯಾಗಿವೆ. ಬ್ಯಾಂಕಿಂಗ್ ಮತ್ತು ಎಫ್ಎಂಸಿಜಿ ವಲಯದ ಸೂಚ್ಯಂಕಗಳು ಇಳಿಕೆಯಾಗಿವೆ.
ವಿದೇಶಿ ಹೂಡಿಕೆದಾರರು ಇಂದು 369 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು 295 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.