ಮುಂಬಯಿ: ಅಮೇರಿಕಾದ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳದವಾಗಿದ್ದರಿಂದ ಜಾಗತಿಕವಾಗಿ ಷೇರುಪೇಟೆ ಅಸ್ಥಿರತೆ ಮುಂದುವರೆದಿದ್ದು (Sensex) ಇದರ ಪರಿಣಾಮ ಭಾರತದ ಮಾರುಕಟ್ಟೆಯಲ್ಲೂ ಮುಂದುವರೆದಿದೆ. ಆದಕಾರಣ ಇಂದು ಮಾರುಕಟ್ಟೆ ಅಲ್ಪ ಪ್ರಮಾಣದಲ್ಲಿ ಏರಿಳಿತ ದಾಖಲಿಸಿತು.
ನಿಫ್ಟಿ ಕೇವಲ 1 ಅಂಕಗಳ ಏರಿಕೆಯೊಂದಿಗೆ 18053 ರಲ್ಲಿ ಪ್ರಾರಂಭವಾದರೆ, ಸೆನ್ಸೆಕ್ಸ್ 138 ಅಂಶಗಳ ಇಳಿಕೆಯೊಂದಿಗೆ 60698 ರಲ್ಲಿ ಆರಂಭವಾಯಿತು. ಬ್ಯಾಂಕ್ ನಿಫ್ಟಿ 16 ಅಂಕಗಳ ಏರಿಕೆಯೊಂದಿಗೆ 41314 ರಲ್ಲಿ ಶುರುವಾಯಿತು. ನಿಫ್ಟಿ ಕೇವಲ 125 ಅಂಕಗಳ ನಡೆವೆ ವಹಿವಾಟು ನಡೆಸಿತು. ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಆರಂಭದಿಂದಲೂ ಇಳಿಮುಖವಾಗುತ್ತಲೇ ಸಾಗಿತ್ತು, ಆದರೆ ವಹಿವಾಟಿನ ಕೊನೆಯ 1 ಗಂಟೆ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳಿಗೆ ಬೇಡಿಕೆ ವ್ಯಕ್ತವಾದ ಕಾರಣ ನಿಫ್ಟಿ ಸಕಾರಾತ್ಮಕವಾಗಿ ಅಂತ್ಯಕಂಡಿತು.
ದಿನದ ಅಂತ್ಯಕ್ಕೆ ನಿಫ್ಟಿ 64 ಅಂಕಗಳ ಏರಿಕೆಯೊಂದಿಗೆ 18117 ರಲ್ಲಿ ಮತ್ತು ಸೆನ್ಸೆಕ್ಸ್ 113 ಅಂಶಗಳ ಹೆಚ್ಚಳದೊಂದಿಗೆ 60950 ರಲ್ಲಿ ಮುಕ್ತಾಯವಾಯಿತು. ಆದರೆ ಬ್ಯಾಂಕ್ ನಿಫ್ಟಿ 39 ಅಂಕಗಳ ಇಳಿಕೆಯೊಂದಿಗೆ 41258 ರಲ್ಲಿ ಅಂತ್ಯಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.37 ರಷ್ಟು ಏರಿಕೆಯಾದರೆ ಮಧ್ಯಮ ಕಂಪನಿಗಳ ಸೂಚ್ಯಂಕ 0.32 ರಷ್ಟು ಇಳಿಕೆಯಾಯಿತು. ಲೋಹ ಮತ್ತು ಸಿಮೆಂಟ್ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಯಿತು.
ಲೋಹ, ಮಾಧ್ಯಮ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕಿಂಗ್ ವಲಯದ ಸೂಚ್ಯಂಕಗಳು ಏರಿಕೆಯಾದರೆ, ಫಾರ್ಮಾ, ಐಟಿ ಮತ್ತು ಎಫ್ಎಂಸಿಜಿ ಸೂಚ್ಯಂಕಗಳು ಇಳಿಕೆಯಾದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಕೊಳ್ಳುವಿಕೆಯನ್ನು ಮುಂದುವರೆಸಿದ್ದು ಇಂದು 1436 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು 548 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇಂದು ಬೆಳ್ಳಿ 1224 ರೂ ಮತ್ತು ಚಿನ್ನ 364 ರೂ ಹೆಚ್ಚಳವಾಗಿದೆ.