ಮುಂಬಯಿ: ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಲಾಭಾಂಶ ಗಳಿಕೆ ಮುಂದುವರಿದರೂ ದೇಶಿ ಸಾಂಸ್ಥಿಕ ಹೂಡಿಕೆದಾರರ (Sensex ) ಸತತ ಹೂಡಿಕೆಯ ಪರಿಣಾಮ ಷೇರುಪೇಟೆ ಇಂದು ಸಕಾರಾತ್ಮಕವಾಗಿ ವಹಿವಾಟು ನಡೆಸಿತು.
ನಿಫ್ಟಿ ಇಂದು ಕೇವಲ 19 ಅಂಕಗಳ ಏರಿಕೆಯೊಂದಿಗೆ 18179 ಅಂಕಗಳಿಗೆ ಮತ್ತು ಸೆನ್ಸೆಕ್ಸ್ 18 ಅಂಕಗಳ ಇಳಿಕೆಯೊಂದಿಗೆ 61144 ಅಂಶಗಳಿಗೆ ಪ್ರಾರಂಭವಾಯಿತು. ಬ್ಯಾಂಕ್ ನಿಫ್ಟಿ 120 ಅಂಕಗಳ ಹೆಚ್ಚಳದೊಂದಿಗೆ 42457 ರಲ್ಲಿ ಆರಂಭವಾಯಿತು.
ನಿಫ್ಟಿ ಆರಂಭದಲ್ಲಿ ಅಲ್ಪ ಕುಸಿದು 18140 ರಲ್ಲಿ ಸಪೋರ್ಟ್ ತೆಗೆದುಕೊಂಡು ಏರುಮುಖವಾಯಿತು. ಸಾರ್ವಜನಿಕ ಬ್ಯಾಂಕ ಷೇರುಗಳಿಗೆ ನಿರಂತರ ಬೇಡಿಕೆ ವ್ಯಕ್ತವಾಗುತ್ತಿರುವುದರಿಂದ ಮಾರುಕಟ್ಟೆಗೆ ಬಲ ನೀಡಿದಂತಾಗಿದೆ. ಇದರಿಂದ ಖಾಸಗಿ ಬ್ಯಾಂಕ್ ಷೇರುಗಳು ಕುಸಿದರೂ ಬ್ಯಾಂಕ್ ನಿಫ್ಟಿ ಉತ್ತಮವಾಗಿ ವಹಿವಾಟು ನಡೆಯಿತು.
ದಿನದ ಕೊನೆಯ ಒಂದು ಗಂಟೆಯಲ್ಲಿ ದೇಶಿ ಹೂಡಿಕೆದಾರರಿಂದ ಷೇರುಗಳಿಗೆ ಬೇಡಿಕೆ ವ್ಯಕ್ತವಾದ ಕಾರಣ ನಿಫ್ಟಿ 84 ಅಂಕಗಳ ಏರಿಕೆಯೊಂದಿಗೆ 18244 ಕ್ಕೆ ಮತ್ತು ಸೆನ್ಸೆಕ್ಸ್ 274 ಅಂಶಗಳ ಹೆಚ್ಚಳದೊಂದಿಗೆ 61418 ರಲ್ಲಿ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 110 ಅಂಕಗಳ ಏರಿಕೆಯೊಂದಿಗೆ 42457 ರಲ್ಲಿ ಅಂತ್ಯವಾಯಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.03 ಮತ್ತು ಮಾಧ್ಯಮ ಕಂಪನಿಗಳ ಸೂಚ್ಯಂಕ 0.55 ರಷ್ಟು ಏರಿಕೆ ದಾಖಲಿಸಿದೆ. ಸಾರ್ವಜನಿಕ ಹೂಡಿಕೆ, ಐಟಿ ಮತ್ತು ಲೋಹದ ಸೂಚ್ಯಂಕಗಳು ಏರಿಕೆಯಾದರೇ ರಿಯಾಲಿಟಿ ಮತ್ತು ಇಂಧನ ಸೂಚ್ಯಂಕಗಳು ಇಳಿಕೆಯಾದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 697 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿದರೇ ದೇಶಿ ಸಾಂಸ್ಥಿಕ ಹೂಡಿಕೆದಾರರು 636 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ.