Site icon Vistara News

SHARE MARKET CRASH: ಸೆನ್ಸೆಕ್ಸ್‌ 1,158 ಅಂಕ ಪತನ, ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ. ನಷ್ಟ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ (BSE) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 1,158 ಅಂಕ ಪತನಕ್ಕೀಡಾಯಿತು. ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಯಿತು. ಕಳೆದ ಏಪ್ರಿಲ್‌ 11ರಿಂದ 34 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಸೆನ್ಸೆಕ್ಸ್‌ 1,158 ಅಂಕ ಕಳೆದುಕೊಂಡು 52,930ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 359 ಅಂಕ ಕಳೆದುಕೊಂಡು 15,808ಕ್ಕೆ ಸ್ಥಿರವಾಯಿತು.

ಅಮೆರಿಕದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಹಣದುಬ್ಬರ ಶೇ.8.1ರ ಉನ್ನತ ಮಟ್ಟದಲ್ಲಿ ಇರುವುದು ಹೂಡಿಕೆದಾರರನ್ನು ಕಳವಳಕ್ಕೀಡು ಮಾಡಿತು. ಜಾಗತಿಕ ಷೇರು ಸೂಚ್ಯಂಕಗಳು ಕುಸಿತಕ್ಕೀಡಾಯಿತು.
ಬಿಎಸ್‌ಇಯ ಷೇರು ಮಾರುಕಟ್ಟೆ ಮೌಲ್ಯ, ಅಂದರೆ ನೋಂದಣಿಯಾಗಿರುವ ಎಲ್ಲ ಷೇರುಗಳ ಮಾರುಕಟ್ಟೆ ಮೌಲ್ಯವು 246ಲಕ್ಷ ಕೋಟಿ ರೂ.ಗಳಿಂದ 241 ಲಕ್ಷ ಕೋಟಿ ರೂ.ಗೆ ಕುಸಿಯಿತು.

ಅಮೆರಿಕದಲ್ಲಿ ಹಣದುಬ್ಬರ ಮಾರ್ಚ್‌ನಲ್ಲಿ ಶೇ. 8.5 ಇದ್ದರೆ, ಏಪ್ರಿಲ್‌ನಲ್ಲಿ ಶೇ.8.3ಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ, ಈಗಲೂ ಉನ್ನತ ಮಟ್ಟದಲ್ಲಿಯೇ ಮುಂದುವರಿದಿದೆ. ಇದು ಜಾಗತಿಕ ಷೇರು ಪೇಟೆಯನ್ನು ತಲ್ಲಣಗೊಳಿಸಿತು.
ಬ್ಯಾಂಕ್‌, ಲೋಹ, ಕ್ಯಾಪಿಟಲ್‌ ಗೂಡ್ಸ್‌, ಆಟೊಮೊಬೈಲ್‌, ತೈಲ ಮತ್ತು ಅನಿಲ, ಎಫ್‌ಎಂಸಿಜಿ, ಔಷಧ, ರಿಯಾಲ್ಟಿ ಸೇರಿದಂತೆ ನಾನಾ ವಲಯಗಳ ಷೇರುಗಳು ಕುಸಿಯಿತು. 2601 ಷೇರುಗಳು ನಷ್ಟಕ್ಕೀಡಾದರೆ, 760 ಷೇರುಗಳು ಲಾಭ ಗಳಿಸಿತು.

ಡಾಲರ್‌ ಎದುರು ರೂಪಾಯಿ 77.3 ಕ್ಕೆ ಕುಸಿಯಿತು. ಇದು ಕೂಡ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.

Exit mobile version