ಡಬ್ಲಿನ್: ತಂತ್ರಜ್ಞಾನ ವಲಯದ ಅಕ್ಸೆಂಚರ್ ಕಂಪನಿ 19,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಗುರುವಾರ ತಿಳಿಸಿದೆ. ವಾರ್ಷಿಕ ಆದಾಯ ಮತ್ತು ಲಾಭದ ಮುನ್ನೋಟವನ್ನೂ ಕಂಪನಿ ತಗ್ಗಿಸಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ವೆಚ್ಚ ನಿಯಂತ್ರಣ ಅನಿವಾರ್ಯವಾಗಿದೆ. ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಕಂಪನಿಗಳು ತಂತ್ರಜ್ಞಾನಕ್ಕೆ ವೆಚ್ಚವನ್ನು ಕಡಿಮೆ ಮಾಡುತ್ತಿವೆ ಎಂದು ತಿಳಿಸಿದೆ.
ಅಕ್ಸೆಂಚರ್ ತನ್ನ ವಾರ್ಷಿಕ ಆದಾಯ, ಲಾಭದ ಮುನ್ನೋಟವನ್ನು 10%ರಿಂದ 8%ಕ್ಕೆ ಕಡಿತಗೊಳಿಸಿದೆ. ಇತ್ತೀಚೆಗೆ ಕಂಪನಿಯು ಬೆಂಗಳೂರು ಮೂಲದ ಇಂಡಸ್ಟ್ರಿಯಲ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿ ಫ್ಲೊಟುರಾವನ್ನು ಖರೀದಿಸಿತ್ತು. ಫ್ಲೊಟುರಾ, ಅಕ್ಸೆಂಚರ್‌ನ ಕೈಗಾರಿಕಾ ಎಐ ಸೇವೆಯನ್ನು ಸುಧಾರಿಸಲಿದೆ ಎಂದು ಕಂಪನಿ ತಿಳಿಸಿತ್ತು.
ಐರಿಷ್- ಅಮೆರಿಕನ್ ಮೂಲದ ಅಕ್ಸೆಂಚರ್ ಐಟಿ ವೃತ್ತಿಪರ ಸೇವೆ ಒದಗಿಸುವ ಕಂಪನಿಯಾಗಿದೆ. ಫಾರ್ಚ್ಯೂನ್ ಗ್ಲೋಬಲ್ 500 ಕಂಪನಿಯಾಗಿದೆ. 1989ರಲ್ಲಿ ಸ್ಥಾಪನೆಯಾಗಿರುವ ಕಂಪನಿಯಲ್ಲಿ 7.38 ಲಕ್ಷ ಉದ್ಯೋಗಿಗಳು ಇದ್ದಾರೆ.
ಕ್ರೆಡಿಟ್ ಸ್ವೀಸ್ ಬಿಕ್ಕಟ್ಟು, ಉದ್ಯೋಗ ಕಡಿತ ಸಂಭವ:
ಸ್ವಿಸ್ ಬ್ಯಾಂಕಿಂಗ್ ದಿಗ್ಗಜ ಯುಬಿಎಸ್, ದಿವಾಳಿಯಂಚಿನಲ್ಲಿರುವ ಕ್ರೆಡಿಟ್ ಸ್ವೀಸ್ ಅನ್ನು ಖರೀದಿಸಿದೆ. (UBS-Credit Suisse merger) ಇದರ ಪರಿಣಾಮ ಭಾರತದಲ್ಲೂ ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಅಪಾಯವೂ ಇದೆ. ಯುಬಿಎಸ್ ಮತ್ತು ಕ್ರೆಡಿಟ್ ಸ್ವೀಸ್ ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಬ್ಯಾಕ್ ಆಫೀಸ್‌ಗಳನ್ನು ಹೊಂದಿದ್ದು, ಈ ಕಚೇರಿಗಳಲ್ಲಿ 7,000ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಯುಬಿಎಸ್‌ನಲ್ಲಿ ಕ್ರೆಡಿಟ್ ಸ್ವೀಸ್ ವಿಲೀನವಾಗುತ್ತಿರುವುದರಿಂದ ವೆಚ್ಚ ನಿಯಂತ್ರಣದ ಭಾಗವಾಗಿ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.
ಯುಬಿಎಸ್ ಮತ್ತು ಕ್ರೆಡಿಟ್ ಸ್ವೀಸ್ ತಮ್ಮ ತಂತ್ರಜ್ಞಾನ ಕೇಂದ್ರಗಳಲ್ಲಿ 14,000 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ 7,000 ಮಂದಿ ಭಾರತದ ನಾನಾ ನಗರಗಳಲ್ಲಿನ ಟೆಕ್ ಸೆಂಟರ್‌ಗಳಲ್ಲಿ (Global in-house centre) ಇದ್ದಾರೆ.
ಸ್ವಿಜರ್ಲೆಂಡ್‌ನ ಬ್ಯಾಂಕಿಂಗ್ ದಿಗ್ಗಜ ಯುಬಿಎಸ್ (UBS) ದಿವಾಳಿಯಾಗುವ ಅಪಾಯದಲ್ಲಿರುವ ಮತ್ತೊಂದು ಸ್ವಿಸ್ ಬ್ಯಾಂಕ್ ಕ್ರೆಡಿಟ್ ಸ್ವೀಸ್ ಅನ್ನು 26,800 ಕೋಟಿ ರೂ.ಗಳ ಮೆಗಾ ಡೀಲ್‌ನಲ್ಲಿ (3.25 ಶತಕೋಟಿ ಡಾಲರ್) ಇತ್ತೀಚೆಗೆ ಖರೀದಿಸಿದೆ. (UBS Credit Suisse deal) ಒಂದು ವೇಳೆ ಕ್ರೆಡಿಟ್ ಸ್ವೀಸ್ ದಿವಾಳಿಯಾದರೆ ಜಾಗತಿಕ ಆರ್ಥಿಕತೆಗೆ, ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳ ಬ್ಯಾಂಕಿಂಗ್ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಸ್ವಿಸ್ ಅಧಿಕಾರಿಗಳು ಇದೀಗ ಮೆಗಾ ಡೀಲ್ ಕುದುರಿಸಿದ್ದಾರೆ.
ಈ ಸ್ವಿಸ್ ಡೀಲ್ ಬಳಿಕ ವಿಶ್ವದ ಸೆಂಟ್ರಲ್ ಬ್ಯಾಂಕ್‌ಗಳು ಮುಂಬರುವ ವಾರಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಸಂಘಟಿತ ಕ್ರಮವನ್ನು ಕೈಗೊಳ್ಳಲು ಮುಂದಾಗಿವೆ. ಪ್ರತಿ ದಿನ ಬ್ಯಾಂಕ್‌ಗಳಿಗೆ ಅಗತ್ಯ ಇದ್ದರೆ ಡಾಲರ್ ಸಾಲ ನೀಡಲು ವ್ಯವಸ್ಥೆ ಕಲ್ಪಿಸಲಿವೆ. 2008ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಬ್ಯಾಂಕಿಂಗ್ ದಿಗ್ಗಜ ಲೆಹ್ಮನ್ ಬ್ರದರ್ಸ್ ದಿವಾಳಿಯಾಗಿ ಆರ್ಥಿಕ ಹಿಂಜರಿತ ಸಂಭವಿಸಿದಾಗ ಈ ರೀತಿ ಮಾಡಲಾಗಿತ್ತು. ಆಗ ಬ್ಯಾಂಕ್‌ಗಳು ಸೆಂಟ್ರಲ್ ಬ್ಯಾಂಕ್‌ಗಳಿಂದ 580 ಶತಕೋಟಿ ಡಾಲರ್ (47 ಲಕ್ಷ ಕೋಟಿ ರೂ.)