ಮುಂಬಯಿ: ಎಚ್‌ಡಿಎಫ್‌ಸಿ ಮತ್ತು ಕೋಟಕ್ ಬ್ಯಾಂಕ್ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಬೆಂಬಲದಿಂದ ಇಂದು ಮಾರುಕಟ್ಟೆ ಅಲ್ಪ ಪ್ರಮಾಣದ ಸಕಾರಾತ್ಮಕತೆಯೊಂದಿಗೆ ವಹಿವಾಟು ನಡೆಸಿದೆ.
ನಿಫ್ಟಿ ದಿನ ಪೂರ್ತಿ ಕೇವಲ 90 ಅಂಕಗಳ ಪರಿಮಿತಿಯಲ್ಲಿ ಏರಿಳಿತ ದಾಖಲಿಸಿದೆ. ಬ್ಯಾಂಕ್ ನಿಫ್ಟಿ ಇಂದೂ ಸಹ ಸಾರ್ವಕಾಲಿಕ ಏರಿಕೆಯಾಗಿದೆ.
ಬೆಳಿಗ್ಗೆ ಕೇವಲ 5 ಅಂಕಗಳ ಇಳಿಕೆಯೊಂದಿಗೆ 18398 ರಲ್ಲಿ ನಿಫ್ಟಿ ಪ್ರಾರಂಭವಾದರೆ, ಸೆನ್ಸೆಕ್ಸ್ 164 ಅಂಶಗಳ ಕಡಿತದೊಂದಿಗೆ 61708 ರಲ್ಲಿ ಆರಂಭವಾಯಿತು, ಬ್ಯಾಂಕ್ ನಿಫ್ಟಿ ಸಹ ಕೇವಲ 1 ಅಂಕಗಳ ಇಳಿಕೆಯೊಂದಿಗೆ 42371 ರಲ್ಲಿ ಶುರುವಾಯಿತು.
ಅಲ್ಪಾವಧಿ ಹೂಡಿಕೆದಾರರ ಲಾಭಾಂಶ ತೆಗೆದುಕೊಳ್ಳಲು ಮುಂದಾಗಿರುವುದು ಮತ್ತು ಷೇರುಪೇಟೆ ಸಾರ್ವಕಾಲಿಕ ಏರಿಕೆಯ ಸಮೀಪ ಟೆಕ್ನಿಕಲಿ ರೆಜಿಸ್ಟೇನ್ಸ್ ಇರುವುದರಿಂದ ಮಾರುಕಟ್ಟೆ ಅಲ್ಪ ಅಂಕಿಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ. ಬ್ಯಾಂಕ್ ನಿಫ್ಟಿ ಸಹ 42600 ರಲ್ಲಿ ರೆಜಿಸ್ಟೇನ್ಸ್ ತಲುಪಿ ಇಳಿಕೆಯಾಗಿದೆ.
ದಿನದ ಅಂತ್ಯಕ್ಕೆ ನಿಫ್ಟಿ ಕೇವಲ 6 ಅಂಕಗಳ ಏರಿಕೆಯೊಂದಿಗೆ 18409 ರಲ್ಲಿ ಮುಕ್ತಾಯವಾದರೆ, ಸೆನ್ಸೆಕ್ಸ್ 107 ಅಂಶಗಳ ಹೆಚ್ಚಳದೊಂದಿಗೆ 61980 ರಲ್ಲಿ ಪೂರ್ಣಗೊಂಡಿದೆ. ಬ್ಯಾಂಕ್ ನಿಫ್ಟಿ 165 ಅಂಕಗಳ ಏರಿಕೆಯೊಂದಿಗೆ 42535 ಕ್ಕೆ ಅಂತ್ಯಗೊಂಡಿದೆ. ನಾಳೆ ಫ್ಯೂಚರ್ ಆ್ಯಂಡ್ ಆಪ್ಷನ್ ಮಾರುಕಟ್ಟೆಯ ವಾರದ ವಾಯಿದೆ ದಿನವಾಗಿರುವುದರಿಂದ ಹೆಚ್ಚು ವಹಿವಾಟು ನಡೆಯುವ ಸಾಧ್ಯತೆಗಳಿವೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ಅಲ್ಪ ಪ್ರಮಾಣದ ಅಂತರದಲ್ಲಿ ವಹಿವಾಟು ನಡೆಸಿದರೂ ಸಣ್ಣ ಕಂಪನಿಗಳ ಸೂಚ್ಯಂಕ ಶೇ 0.83 ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.90ರಷ್ಟು ಇಳಿಕೆಯಾಗಿವೆ. ಐಟಿ ಮತ್ತು ಬ್ಯಾಂಕಿಂಗ್ ಸೂಚ್ಯಂಕಗಳು ಏರಿಕೆಯಾದರೆ, ಲೋಹ, ರಿಯಾಲಿಟಿ ಮತ್ತು ಮಾಧ್ಯಮ ಕ್ಷೇತ್ರದ ಸೂಚ್ಯಂಕಗಳು ಇಳಿಕೆಯಾಗಿವೆ.
ಕೆಲವು ದಿನಗಳಿಂದ ಸತತವಾಗಿ ಹೂಡಿಕೆ ಮಾಡುತ್ತಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇಂದು 386 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅದೇ ರೀತಿ ದೇಶಿ ಸಾಂಸ್ಥಿಕ ಹೂಡಿಕೆದಾರರು 1437 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ.