ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 66,000 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತು. (Stock market) ಸೆನ್ಸೆಕ್ಸ್ 502 ಅಂಕ ಗಳಿಸಿ 66,060ಕ್ಕೆ ಸ್ಥಿರವಾಯಿತು. ನಿಫ್ಟಿ 150 ಅಂಕ ಏರಿಕೆಯಾಗಿ 19,564ಕ್ಕೆ ಸ್ಥಿರವಾಯಿತು. ನಿಫ್ಟಿ (nifty) ಕಳೆದ ಮಾರ್ಚ್‌ನಿಂದ 15% ಏರಿಕೆ ದಾಖಲಿಸಿದೆ.
ಅಮೆರಿಕದಲ್ಲಿ ಬಡ್ಡಿ ದರಗಳು ಭವಿಷ್ಯದ ದಿನಗಳಲ್ಲಿ ಇಳಿಕೆಯಾಗಬಹುದು ಎಂಬ ವಿಶ್ವಾಸದ ಪರಿಣಾಮ ಅಲ್ಲಿನ ಷೇರು ಸೂಚ್ಯಂಕಗಳು ಸುಧಾರಿಸಿತು. ವಿದೇಶಿ ಹೂಡಿಕೆಯ ಹರಿವು ಕೂಡ ಗಣನೀಯ ವೃದ್ಧಿಸಿತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಟಿ ಸ್ಟಾಕ್ಸ್‌ಗಳಾದ ಟಿಸಿಎಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ವಿಪ್ರೊ ಅತಿ ಹೆಚ್ಚು ಲಾಭ ಗಳಿಸಿತು. 3-5% ಏರಿಕೆ ದಾಖಲಿಸಿತು. ಟಾಟಾ ಸ್ಟೀಲ್, ನೆಸ್ಲೆ, ಎಚ್‌ಯುಎಲ್, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್ ಷೇರು ದರ ಕೂಡ ಜಿಗಿಯಿತು. ಎಂ&ಎಂ, ಟೈಟನ್, ಮಾರುತಿ, ಅಲ್ಟ್ರಾ ಟೆಕ್ ಸಿಮೆಂಟ್, ಸನ್ ಫಾರ್ಮಾ ಷೇರು ನಷ್ಟಕ್ಕೀಡಾಯಿತು.
ಜೆಬಿಎಂ ಆಟೊ ಮತ್ತು ಕಂಪನಿಯ ಷೇರುಗಳು 11% ಏರಿಕೆಯನ್ನು ದಾಖಲಿಸಿತು. ಕಂಪನಿಯು 5,000 ಎಲೆಕ್ಟ್ರಿಕ್ ಬಸ್‌ಗಳಿಗೆ ಆರ್ಡರ್ ನೀಡಿದೆ. ಪತಂಜಲಿ ಫುಡ್ಸ್ ಷೇರು ದರ 5% ಏರಿಕೆಯಾಯಿತು. ವಲಯಾವಾರು ಲೆಕ್ಕಾಚಾರದಲ್ಲಿ ನಿಫ್ಟಿ ಐಟಿ 4.45%, ನಿಫ್ಟಿ ಮೀಡಿಯಾ 3.94% ವೃದ್ಧಿಸಿತು. ಬ್ಯಾಂಕ್‌ಗಳು, ಆಟೊಮೊಬೈಲ್, ಹಣಕಾಸು, ಎಫ್‌ಎಂಸಿಜಿ, ಮೆಟಲ್, ಫಾರ್ಮಾ, ರಿಯಾಲ್ಟಿ ವಲಯದ ಷೇರುಗಳು ಏರಿಕೆಯಾಗಿವೆ. 2,226 ಷೇರುಗಳು ಲಾಭ ಗಳಿಸಿದರೆ, 1,196 ಷೇರುಗಳು ನಷ್ಟಕ್ಕೀಡಾಯಿತು. 145 ಷೇರುಗಳು ಯಥಾಸ್ಥಿತಿಯಲ್ಲಿತ್ತು.
ತಜ್ಞರು ಏನೆನ್ನುತ್ತಾರೆ? ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವುದು ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ಇನ್ನೂ 0.25% ಬಡ್ಡಿ ದರ ಏರಿಕೆಯು ಅಮೆರಿಕದ ಆರ್ಥಿಕತೆಯ ಸ್ಥಿರತೆಗೆ ಸಾಕಾಗಬಹುದು ಎಂಬ ಭಾವ ಮೂಡಿಸಿದೆ. ಅಮೆರಿಕದಲ್ಲಿ ಜೂನ್‌ನಲ್ಲಿ ಹಣದುಬ್ಬರ 0.1% ಏರಿತ್ತು. 2020ರ ಆಗಸ್ಟ್‌ನಿಂದ ಇದು ಕಡಿಮೆ ಹಣದುಬ್ಬರ ಮಟ್ಟವಾಗಿದೆ. ಭಾರತೀಯ ಐಟಿ ಷೇರುಗಳ ಖರೀದಿ ಭರಾಟೆಗೆ ಈ ವಿಶ್ವಾಸ ಕಾರಣವಾಯಿತು. (Indian equity market) ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲ ದರ ಇಳಿಮುಖವಾಗಿರುವುದು ಕೂಡ ಪ್ರಭಾವ ಬೀರಿದೆ.
ಐಟಿ ಷೇರುಗಳ ಜಿಗಿತ: ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಶುಕ್ರವಾರ 4.5% ಏರಿಕೆಯಾಯಿತು. ಐಟಿ ಷೇರುಗಳ ಮಟ್ಟಿಗೆ 2020ರ ಸೆಪ್ಟೆಂಬರ್ ಬಳಿಕ ಒಂದೇ ದಿನದ ಗರಿಷ್ಠ ಗಳಿಕೆ ಇದಾಗಿದೆ. ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವಾದ ಬಳಿಕ ಐಟಿ ಷೇರುಗಳು ಕುಸಿದಿತ್ತು.
ಇದನ್ನೂ ಓದಿ: Stock Market : ಮೊದಲ ಬಾರಿಗೆ ಸೆನ್ಸೆಕ್ಸ್ 66,000ಕ್ಕೆ ಏರಿಕೆ, ನಿಫ್ಟಿ 19,550
ವಿದೇಶಿ ಹೂಡಿಕೆಯ ಹರಿವು ಹೆಚ್ಚಳ: ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ಮತ್ತೆ ಭಾರಿ ಹೂಡಿಕೆ ಮಾಡುತ್ತಿದ್ದಾರೆ. ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು 2023ರ ಏಪ್ರಿಲ್‌ನಿಂದ 1.27 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹಣಕಾಸು ಸೇವೆ, ಆಟೊಮೊಬೈಲ್, ಕ್ಯಾಪಿಟಲ್ ಗೂಡ್ಸ್, ನಿರ್ಮಾಣ ವಲಯದಲ್ಲಿ ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.