ನವ ದೆಹಲಿ: ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಬುಧವಾರ ತಮ್ಮ ನಾಗಾಲೋಟವನ್ನು ಮುಂದುವರಿಸಿವೆ. (Stock Market) ಸೆನ್ಸೆಕ್ಸ್ ಮೊದಲ ಬಾರಿಗೆ ದಾಖಲೆಯ 67,000 ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ಸೆನ್ಸೆಕ್ಸ್ 302 ಅಂಕ ಏರಿ 67,097ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 83 ಅಂಕ ಏರಿಕೆಯಾಗಿ 19,833ಕ್ಕೆ ಸ್ಥಿರವಾಯಿತು.
ಸತತ ಐದು ದಿನಗಳಿಂದ ಸೆನ್ಸೆಕ್ಸ್ ರ‍್ಯಾಲಿ ನಡೆಯುತ್ತಿದ್ದು, ಹೂಡಿಕೆದಾರರ ಉತ್ಸಾಹ ಹೆಚ್ಚಿದೆ. ನಿಫ್ಟಿ ದಿನದ ಮಧ್ಯಂತರದಲ್ಲಿ 19,851ಕ್ಕೆ ಏರಿತ್ತು. ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳು ಭಾರಿ ಲಾಭ ಗಳಿಸಿತು. ಕಳೆದ ಕೆಲ ದಿನಗಳಿಂದ ಐಟಿ ಷೇರುಗಳು ಭಾರಿ ಮುನ್ನಡೆ ಸಾಧಿಸಿವೆ.
ಅಮೆರಿಕ ಮತ್ತು ಯುರೋಪ್‌ನಲ್ಲಿ ಟೆಕ್ ಕಂಪನಿಗಳ ಆದಾಯದಲ್ಲಿ ಭರ್ಜರಿ ಏರಿಕೆ ದಾಖಲಾಗಿದೆ. ಇದು ಈ ಕಂಪನಿಗಳ ಷೇರುಗಳ ಚೇತರಿಕೆಗೂ ಕಾರಣವಾಯಿತು. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸುವ ಸಾಧ್ಯತೆ ಇದೆ. ಇದು ಷೇರು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.
ಕಳೆದ ಒಂದು ತಿಂಗಳಿನಲ್ಲಿ ಸೆನ್ಸೆಕ್ಸ್ ಸುಮಾರು 4,000 ಅಂಕಗಳನ್ನು ಗಳಿಸಿದೆ. ಇದಕ್ಕೆ ಮುಖ್ಯ ಕಾರಣ ಟೆಕ್ನಾಲಜಿ ಷೇರುಗಳ ಏರಿಕೆ. ವಿದೇಶಿ ಹೂಡಿಕೆದಾರರು 40,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಕಳೆದ ಐದು ತಿಂಗಳಿನಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದರು ಎಂದು ನ್ಯಾಶನಲ್ ಸೆಕ್ಯುರಿಟೀಸ್ ಡೆಪಾಸಿಟರಿ ತಿಳಿಸಿದೆ.
ಇದನ್ನೂ ಓದಿ: Adani group : ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರು ಮಾರಿದ ಅದಾನಿ ಕುಟುಂಬ
ದೇಶದ ಆರ್ಥಿಕ ಪ್ರಗತಿ ಬಗ್ಗೆಯೂ ಹೂಡಿಕೆದಾರರು ವಿಶ್ವಾಸ ಹೊಂದಿದ್ದಾರೆ. ಇದು ಕೂಡ ಸೂಚ್ಯಂಕ ಜಿಗಿತಕ್ಕೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡ ಷೇರು ಪೇಟೆಗಳು ಸಕಾರಾತ್ಮಕವಾಗಿತ್ತು. ಕಚ್ಚಾ ತೈಲ ದರ ಬ್ಯಾರೆಲ್‌ಗೆ 80.01 ಡಾಲರ್‌ನಷ್ಟಿತ್ತು. ಈ ನಡುವೆ ಡಾಲರ್ ಎದುರು ರೂಪಾಯಿ ಮೌಲ್ಯ 82.10 ರೂ.ನಷ್ಟಿತ್ತು.