Site icon Vistara News

Stock Market : ಸೆನ್ಸೆಕ್ಸ್‌ ಮೊದಲ ಬಾರಿಗೆ 65,000ಕ್ಕೆ ಜಿಗಿತ, ನಿಫ್ಟಿ ಹೈ ಜಂಪ್

BSE

ಮುಂಬಯಿ: ಭಾರತೀಯ ಷೇರು ಮಾರುಕಟ್ಟೆಗೆ ಸೋಮವಾರ ಐತಿಹಾಸಿಕ ದಿನ. (Stock Market) ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಮೊಟ್ಟ ಮೊದಲ ಬಾರಿಗೆ 65,000 ಅಂಕಗಳ ಮೈಲುಗಲ್ಲನ್ನು ದಾಟಿತು. ಸತತ ನಾಲ್ಕು ದಿನಗಳಿಂದ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಏರುಗತಿಯಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾರುಕಟ್ಟೆಯ ಚೇತರಿಕೆ, ವಿದೇಶಿ ಹೂಡಿಕೆಯ ಒಳಹರಿವು ಸಕಾರಾತ್ಮಕ ಪ್ರಭಾವ ಬೀರಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 449 ಅಂಕ ಜಿಗಿದು 65,168ಕ್ಕೆ ಏರಿ ದಾಖಲೆ ಸೃಷ್ಟಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 128 ಅಂಕ ಜಿಗಿದು 19,318ಕ್ಕೆ ಸ್ಥಿರವಾಯಿತು. ಅಮೆರಿಕದಲ್ಲಿ ಹಣದುಬ್ಬರ ಇಳಿಮುಖವಾಗಿರುವುದು ಜಾಗತಿಕ ಷೇರುಪೇಟೆ ಮೇಲೆ ಪ್ರಭಾವ ಬೀರಿತು.

ಸೆನ್ಸೆಕ್ಸ್‌ ಪ್ಯಾಕ್‌ನಲ್ಲಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಮಹೀಂದ್ರಾ & ಮಹೀಂದ್ರಾ, ಅಲ್ಟ್ರಾ ಟೆಕ್‌ ಸಿಮೆಂಟ್‌, ಟಾಟಾ ಸ್ಟೀಲ್‌, ಬಜಾಜ್‌ ಫೈನಾನ್ಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ರಿಲಯನ್ಸ್‌ ಇಂಡಸ್ಟ್ರೀಸ್‌, ಬಜಾಜ್‌ ಫಿನ್‌ಸರ್ವ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರು ಗಣನೀಯ ಲಾಭ ಗಳಿಸಿತು. ಪವರ್‌ ಗ್ರಿಡ್‌, ಮಾರುತಿ, ಟೆಕ್‌ ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಷೇರು ದರ ಹಿಂದುಳಿದಿತ್ತು.

ಸೋಲ್‌, ಟೋಕಿಯೊ, ಶಾಂಘೈ, ಹಾಂಕಾಂಗ್‌ನಲ್ಲಿ ಷೇರು ಸೂಚ್ಯಂಕಗಳು ಜಿಗಿಯಿತು. ಅಮೆರಿಕದಲ್ಲಿ ಶುಕ್ರವಾರ ಟ್ರೇಡಿಂಗ್‌ ಚುರುಕಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 75.41 ಡಾಲರ್‌ನಷ್ಟಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಶುಕ್ರವಾರ 6,397 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.

ಇದನ್ನೂ ಓದಿ: Adani group : ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರು ಮಾರಿದ ಅದಾನಿ ಕುಟುಂಬ

ಜಿಎಸ್‌ಟಿ ಸಂಗ್ರಹ ಕಳೆದ ಜೂನ್‌ನಲ್ಲಿ 1.61 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ 4ನೇ ಬಾರಿಗೆ ಈ ಎತ್ತರಕ್ಕೆ ಸಂಗ್ರಹ ವೃದ್ಧಿಸಿದೆ. ಅಮೆರಿಕದಲ್ಲಿ 2023ರ ಮೊದಲ ತ್ರೈಮಾಸಿಕದಲ್ಲಿ ಅನಿರೀಕ್ಷಿತವಾಗಿ ಜಿಡಿಪಿಯಲ್ಲಿ 2 ಪರ್ಸೆಂಟ್‌ ಬೆಳವಣಿಗೆ ದಾಖಲಾಗಿದೆ. ಅಮೆರಿಕದಲ್ಲಿ ಈ ವರ್ಷ ರಿಸೆಶನ್‌ ಆಗಬಹುದು ಎಂಬ ಭಾವನೆ ಇತ್ತು. ಆದರೆ ಅದೀಗ ಬದಲಾಗುತ್ತಿದೆ. ಅಮೆರಿಕದ ಎಕಾನಮಿ ಗಣನೀಯ ಚೇರಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದೆಲ್ಲವೂ ಷೇರು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.

Exit mobile version