ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಬೆಳಗ್ಗೆ ಮೊಟ್ಟ ಮೊದಲ ಬಾರಿಗೆ 66,000 ಅಂಕಗಳಿಗೆ ಚೇತರಿಸಿದೆ. (Stock Market) ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ನಿಫ್ಟಿ 19,550ಕ್ಕೆ ಜಿಗಿದಿದೆ. ಅಮೆರಿಕ, ಏಷ್ಯಾ ಸೇರಿದಂತೆ ಜಾಗತಿಕ ಷೇರು ಮಾರುಕಟ್ಟೆಗಳ ಚೇತರಿಕೆ ಸಕಾರಾತ್ಮಕ ಪ್ರಭಾವ ಬೀರಿತು.
ಸ್ಮಾಲ್ ಕ್ಯಾಪ್ ಷೇರುಗಳ ದರ 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಯಿತು. ಟಿಸಿಎಸ್ ಷೇರು ದರ ಏರಿದರೆ ಎಚ್‌ಸಿಎಲ್ ಷೇರು ದರ ಇಳಿಯಿತು. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (sensex) ಕಾರ್ಪೊರೇಟ್ ವಲಯದ ಪ್ರಮುಖ ಕಂಪನಿಗಳ ಫಲಿತಾಂಶ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಸೆನ್ಸೆಕ್ಸ್ 65,992ಕ್ಕೆ ಏರಿತ್ತು. 598 ಅಂಕಗಳ ಗಳಿಕೆ ದಾಖಲಿಸಿತ್ತು. (nifty) ನಿಫ್ಟಿ 161 ಅಂಕ ಏರಿಕೆಯಾಗಿ 19,545ಕ್ಕೆ ಚೇತರಿಸಿತ್ತು.
ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಟಿ ಷೇರುಗಳು ಲಾಭ ಗಳಿಸಿತು. ಅಮೆರಿಕದಲ್ಲಿ ರಿಟೇಲ್ ಹಣದುಬ್ಬರ ಮೊದಲ ಬಾರಿಗೆ ಜೂನ್‌ನಲ್ಲಿ 3%ಕ್ಕೆ ಇಳಿಕೆಯಾಗಿದೆ. ಇದು ನಿರೀಕ್ಷೆಗಿಂತಲೂ ಕಡಿಮೆಯಾಗಿದ್ದು, ಸಕಾರಾತ್ಮಕ ಪ್ರಭಾವ ಬೀರಿತು. ಈ ನಡುವೆ ಭಾರತದಲ್ಲಿ ಜೂನ್‌ನಲ್ಲಿ ರಿಟೇಲ್ ಹಣದುಬ್ಬರ ಕಳೆದ ಜೂನ್‌ನಲ್ಲಿ 4.81%ಕ್ಕೆ ಏರಿಕೆಯಾಯಿತು.
ಟಾಟಾ ಸ್ಟೀಲ್, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಂ&ಎಂ, ಎಸ್‌ಬಿಐ, ಬಜಾಜ್ ಫೈನಾನ್ಸ್ ಷೇರುಗಳು ಲಾಭ ಗಳಿಸಿತು. ಎಚ್‌ಸಿಎಲ್ ಟೆಕ್, ನೆಸ್ಲೆ, ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಎಚ್‌ಯುಎಲ್ ಷೇರುಗಳು ನಷ್ಟಕ್ಕೀಡಾಯಿತು. ನಿಫ್ಟಿ ಮೆಟಲ್ 0.98% ಏರಿತು.
ಇದನ್ನೂ ಓದಿ: Adani group : ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರು ಮಾರಿದ ಅದಾನಿ ಕುಟುಂಬ
ಅಮೆರಿಕದಲ್ಲಿ ಹಣದುಬ್ಬರದ ಪ್ರಮಾಣ ಇಳಿಕೆಯಾಗಿರುವುದು ಜಾಗತಿಕ ಷೇರು ಪೇಟೆಗೆ ಹೊಸ ಚೈತನ್ಯ ತುಂಬಿದೆ. ಇದರ ಸಕಾರಾತ್ಮಕ ಪ್ರಭಾವ ಇನ್ನೂ ಮುಂದುವರಿಯುವ ನಿರೀಕ್ಷೆ ಇದೆ. ಜೊಮ್ಯಾಟೊ ಷೇರು ದರ ಗುರುವಾರ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. 84.5 ರೂ.ನಷ್ಟಿತ್ತು. ಐಪಿಒ ದರ 76 ರೂ. ಇತ್ತು.