ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ಸಂಸ್ಥೆಯ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಶನಿವಾರ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು. ( Empower HER Exhibition ) ನಗರದ ಕೆ.ಜಿ ರಸ್ತೆಯಲ್ಲಿನ ಎಫ್‌ಕೆಸಿಸಿಐ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಅವರು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಮೇಶ್ ಚಂದ್ರ ಲಹೋಟಿ ಅವರು, ಎಫ್‌ಕೆಸಿಸಿಐ ಸಂಸ್ಥೆಯು ವಿಸ್ತಾರ ನ್ಯೂಸ್ ಸಹಭಾಗಿತ್ವದಲ್ಲಿ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಈ ವಿಶೇಷವಾದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಡೆಸುತ್ತಿದೆ. ಸಾರ್ವಜನಿಕರು ಉಚಿತವಾಗಿ ಭೇಟಿ ನೀಡಿ ಇಲ್ಲಿನ ಮಳಿಗೆಗಳಿಂದ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು ಎಂದರು.
ಕೈಯಿಂದಲೇ ತಯಾರಿಸಿದ ಆಭರಣಗಳು, ಜ್ಯುವೆಲ್ಲರಿಗಳು, ಫ್ಯಾಷನ್ ಮತ್ತು ಸಾಂಪ್ರದಾಯಿಕ ಒಡವೆಗಳು, ಸೀರೆಗಳು, ಗಿಫ್ಟ್‌ಗಳು, ಕಲಾಕೃತಿಗಳು, ತಾಮ್ರದ ಪಾತ್ರೆಗಳು, ಆಭರಣಗಳು, ಕಲಾಕೃತಿಗಳು, ಚಿತ್ರಕಲೆಯ ಕಲಾಕೃತಿಗಳು, ಪರ್ಸನಲ್ ಕೇರ್ ಮತ್ತು ಹೆಲ್ತ್ ಕೇರ್ ವಸ್ತುಗಳು, ಆಹಾರೋತ್ಪನ್ನಗಳು, ಡಿಜಿಟಲ್ ಉತ್ಪನ್ನಗಳು, ನಾನಾ ಬಗೆಯ ಉಡುಪುಗಳು, ಸಿರಿಧಾನ್ಯದ ಉತ್ಪನ್ನಗಳನ್ನು ಮಹಿಳಾ ಉದ್ದಿಮೆದಾರರು ಮಾರಾಟ ಮಾಡಿದರು. ರಿಯಲ್ ಎಸ್ಟೇಟ್ ಮತ್ತು ಹೌಸಿಂಗ್ ಪ್ರಾಜೆಕ್ಟ್‌ಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ಕಾರ್ಪೊರೇಟ್ ಗಿಫ್ಟ್‌ಗಳೂ ಪ್ರದರ್ಶನದಲ್ಲಿದ್ದವು.
ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷರಾದ ಎಂಜಿ ಬಾಲಕೃಷ್ಣ, ಉಪಾಧ್ಯಕ್ಷೆ ಉಮಾ ರೆಡ್ಡಿ, ನಿರ್ಗಮಿತ ಅಧ್ಯಕ್ಷ ಬಿವಿ ಗೋಪಾಲ ರೆಡ್ಡಿ, ಸಲಹೆಗಾರ ಎಂಸಿ ದಿನೇಶ್, ಮಹಿಳಾ ಉದ್ದಿಮೆದಾರರ ಸಮಿತಿ ಅಧ್ಯಕ್ಷೆ ತೇಜಶ್ರೀ ಮೊದಲಾದವರು ಭಾಗವಹಿಸಿದ್ದರು.